ಉಡುಪಿ: ಅಕ್ರಮ ಪಟಾಕಿ ದಾಸ್ತಾನು ಅಂಗಡಿಗೆ ಪೊಲೀಸ್ ದಾಳಿ
ಉಡುಪಿ, ಅ.16(ಉಡುಪಿ ಟೈಮ್ಸ್ ವರದಿ): ನಗರದ ಮದರ್ ಆಫ್ ಸಾರೋಸ್ ಚರ್ಚ್‌ನ ವಿದ್ಯಾಜ್ಯೋತಿ ಬಿಲ್ಡಿಂಗ್ ನ ಪಟಾಕಿ ಮಾರಾಟದ ಅಂಗಡಿಯಲ್ಲಿ ಅಕ್ರಮ ಪಟಾಕಿ ದಾಸ್ತಾನುವಿಟ್ಟ ಬಗ್ಗೆ ಖಚಿತ ಮಾಹಿತಿಯಂತೆ ನಗರ ಪೊಲೀಸರು ದಾಳಿ ನಡೆಸಿದ್ದಾರೆ.
ಬಾಲಕಿಯರ ಪದವಿ ಪೂರ್ವ ಕಾಲೇಜಿನ ಮುಂಭಾಗ ಇರುವ ಕಾಬ್ರಾಲ್ ಗನ್ ಹೌಸ್ ನಲ್ಲಿ ಪರವಾನಗಿ ಇಲ್ಲದೇ ಸುಡುಮದ್ದುಗಳ ಅಕ್ರಮ ದಾಸ್ತಾನು ಬಗ್ಗೆ ಮಾಹಿತಿ ದೊರೆತ ಮೇರೆಗೆ ನಗರ ಠಾಣಾ ಉಪನಿರೀಕ್ಷಕ ಪುನೀತ್ ಅವರ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.
ಸ್ಥಳದಲ್ಲಿ ಪಟಾಕಿಗಳನ್ನು ದಾಸ್ತಾನು ಇಟ್ಟಿರುವುದು ಮಾಲಕ ರೋನಾಲ್ಡ್ ಜಿ ಕಾಬ್ರಾಲ್‌ರನ್ನು ವಿಚಾರಿಸಿದಾಗ ದೀಪಾವಳಿ ಹಬ್ಬದ ಪ್ರಯುಕ್ತ ಮಾರಾಟ ಮಾಡುವ ಉದ್ದೇಶದಿಂದ ಪಟಾಕಿಗಳನ್ನು ಖರೀದಿಸಿರುವುದಾಗಿ ಬಾಯಿಬಿಟ್ಟಿದ್ದಾರೆ.
ಆರೋಪಿ ಕಾಬ್ರಾಲ್ ಒಟ್ಟು 40 ಕೆ ಜಿ ತೂಕದ ಪಟಾಕಿ ಮತ್ತು ಸುಡುಮದ್ದುಗಳನ್ನು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಹಾಗೂ ಪರವಾನಿಗೆ ಇಲ್ಲದೇ ಅಕ್ರಮವಾಗಿ ಪಟಾಕಿ ಸ್ಪೋಟಕಗಳನ್ನು ಮಾನವ ಪ್ರಾಣಕ್ಕೆ ಅಪಾಯ ಉಂಟಾಗುವ ರೀತಿಯಲ್ಲಿ ಸಂಗ್ರಹಿಸಿದ್ದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 181/2024 ಕಲಂ: 9ಬಿ(1)(b) ಕರ್ನಾಟಕ ಎಕ್ಸ್ ಪ್ಲೋಸಿವ್ ಆಕ್ಟ್ 1884 ಮತ್ತು 288 BNS ರಂತೆ ಪ್ರಕರಣ ದಾಖಲಾಗಿರುತ್ತದೆ.