ಉಡುಪಿ: ಅ.18-19 ರಂದು ‘ಟೀಚರ್ ಶೈಕ್ಷಣಿಕ ಹಬ್ಬ’
ಉಡುಪಿ: ಭಾರತೀಯ ಜ್ಞಾನ, ವಿಜ್ಞಾನ ಸಮಿತಿ ಉಡುಪಿ ಜಿಲ್ಲೆ ವತಿಯಿಂದ ಟೀಚರ್ ಶೈಕ್ಷಣಿಕ ಹಬ್ಬವನ್ನು ಅ.18 ಮತ್ತು 19 ರಂದು ಉಡುಪಿಯ ಯಕ್ಷಗಾನ ಕಲಾರಂಗ ಐವೈಸಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಭಾರತ ಜ್ಞಾನ – ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಪಿ.ವಿ ಭಂಡಾರಿ ಹೇಳಿದರು.
ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೈಕ್ಷಣಿಕ ಬಿಕ್ಕಟ್ಟುಗಳೊಡನೆ ವರ್ತಮಾನದ ಮುಖಾಮುಖಿ ಎಂಬ ಹೆಸರಿನಲ್ಲಿ ನಡೆಯುವ ವಿವಿಧ ಗೋಷ್ಠಿಗಳಲ್ಲಿ ಶೈಕ್ಷಣಿಕ ನೀತಿಗಳು, ಅವುಗಳ ಅನುಷ್ಠಾನದಲ್ಲಿ ಎದುರಾಗಿರುವ ಸವಾಲುಗ ಳ ಕುರಿತು ಚರ್ಚೆ, ಉಪನ್ಯಾಸ, ಸಂವಾದಗಳು ನಡೆಯಲಿವೆ ಎಂದರು. ಈ ಹಬ್ಬದಲ್ಲಿ ರಾಜ್ಯದ ಬೇರೆ ಬೇರೆ ಭಾಗಗಳ 250 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಅ.18 ರಂದು ಬೆಳಗ್ಗೆ 10.30ಕ್ಕೆ ಕಾರ್ಯಕ್ರಮವನ್ನು ಹೈದರಾಬಾದಿನ ಕೇಂದ್ರೀಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪೊ.ರಾಮ ಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಸಮಿತಿ ಕೋಶಾಧಿಕಾರಿ ಪ್ರೊ. ಕಮಲ್ ಲೊಡಾಯ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯಮಂತ್ರಿಗಳ ಕಾರ್ಯದರ್ಶಿ ಬಿ.ಬಿ ಕಾವೇರಿ, ಶಿಕ್ಷಣ ತಜ್ಞ ಡಾ. ಮಹಾಬಲೇಶ್ವರ ರಾವ್ ಪಾಲ್ಗೊಳ್ಳಲಿದ್ದಾರೆ. ಅ.19 ರಂದು ಮಧ್ಯಾಹ್ನ 2.30 ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ವಿವರಿಸಿದರು.ಅ.18 ರಂದು ಸಂಜೆ 6.30 ಕ್ಕೆ ಯತೀಶ್ ಕೊಳ್ಳೆಗಾಲ ನಿರ್ದೇಶನದ ಅರಿವು ರಂಗಪಯಣ ತಂಡದಿಂದ ನಾಟಕ ಪ್ರದರ್ಶನ ನಡೆಯಲಿದೆ. ಕೋವಿಡ್ ನಂತರ ಮೊದಲ ಬಾರಿಗೆ ಟೀಚರ್ ಶೈಕ್ಷಣಿಕ ಹಬ್ಬ ನಡೆಯುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಉದಯ್ ಗಾಂವಕರ್, ಸಂತೋಷ್ ನಾಯಕ್ ಪಟ್ಲ, ಶುಭಂಕರ್ ಚಕ್ರವರ್ತಿ ಉಪಸ್ಥಿತರಿದ್ದರು.