ಪಡುಕೆರೆ: ಹೋಂ ಸ್ಟೇ, ರೆಸಾರ್ಟ್‌ಗಳಿಂದ ಊರಿನ ಪರಂಪರೆಗೆ ಧಕ್ಕೆ
ಉಡುಪಿ: ಕಳೆದ ನಾಲ್ಕೈದು ವರ್ಷಗಳಿಂದ ಹೋಂಸ್ಟೇ ರೆಸಾರ್ಟ್’ಗಳಿಂದ, ಅದರಿಂದ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳಿಂದ, ಊರಿನ ಪರಂಪರೆಗೆ, ಭಜನಾ ಮಂದಿರಗಳ ಪಾವಿತ್ರ್ಯತೆಗೆ ಸತತ ಧಕ್ಕೆಯಾಗುತ್ತಿರುವುದನ್ನು ಕಂಡು ಕಳೆದ ನಾಲ್ಕೈದು ವರ್ಷಗಳಿಂದ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಕೊಟ್ಟು ಕೊಟ್ಟೂ ಸುಸ್ತಾದ ಊರಿನ ನಾಗರಿಕರು ಮುಂದಿನ ಪ್ರಬಲ ಹೋರಾಟಕ್ಕೆ ಪೂರ್ವಭಾವಿಯಾಗಿ ಸರ್ವಸಂಸ್ಥೆಯ ನೇತೃತ್ವದಲ್ಲಿ ಬ್ರಹತ್ ಸಭೆಯನ್ನು ಆಯೋಜಿಸಿದ್ದರು.
ಭಾನುವಾರ ನಡೆದ ಈ ಬ್ರಹತ್ ಸಭೆಯಲ್ಲಿ ಮಲ್ಪೆ ಪಡುಕರೆಯಿಂದ ಕಾಪು ತನಕದ ಎಲ್ಲಾ ಭಜನಾ ಮಂದಿರಗಳ ಸಹಿತವಾಗಿ ಒಟ್ಟು 35 ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಮಾತೃಮಂಡಳಿಗಳ ಸದಸ್ಯರು ಹಾಗೂ ಊರ ನಾಗರಿಕರು ಸೇರಿದ್ದರು. ಎಲ್ಲಾ ಭಜನಾಮಂದಿರಗಳ ಅಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
“ಅನಾದಿ ಕಾಲದಿಂದ ಮೀನುಗಾರಿಕೆಯನ್ನೇ ನಂಬಿ ಭಜನಾಮಂದಿರಗಳ ನೆಲೆಯಲ್ಲಿ ಬದುಕು ಕಟ್ಟಿಕೊಂಡಿರುವ ಅಪೂರ್ವ ಸಂಸ್ಕೃತಿಯ ಊರು ನಮ್ಮದು. ಇತ್ತೀಚಿನ ಕೆಲವರ್ಷಗಳಿಂದ ಹೋಂಸ್ಟೇ ರೆಸಾರ್ಟ್’ಗಳಿಗೆ ಬರುವ ಪ್ರವಾಸಿಗರಿಂದಾಗಿ ನಮ್ಮ ಪರಂಪರೆಗೆ ಅಪಾರವಾದ ಹಾನಿಯಾಗಿದೆ. ಇನ್ನೂ ನಾವು ಸುಮ್ಮನೆ ಕುಳಿತರೆ ಕೇರಳದ ವಯನಾಡಿನಂತೆ ಊರು ಸರ್ವನಾಶವಾಗುವುದು ಖಂಡಿತ. ಕೊನೆಯ ಎಚ್ಚರಿಕೆಯ ಪ್ರತೀಕವಾಗಿ ಸಂಬಂಧಿಸಿದ ಅಧಿಕಾರಿಗಳಿಗೆ ಎಲ್ಲಾ ಮಂದಿರಗಳೂ ಸೇರಿ ಮನವಿಯನ್ನು ನೀಡೋಣ. ಅದಕ್ಕೆ ಸರಿಯಾದ ಪ್ರತಿಕ್ರಿಯೆ ಸಿಗದೇ ಹೋದರೆ ನಾವು ಬ್ರಹತ್ ಪ್ರತಿಭಟನೆಗೆ ಸಿದ್ಧರಾಗೋಣ. ಸಾವಿರಾರು ಕೋಟಿ ರುಪಾಯಿಗಳ ಮರಿನಾದಂತಹ ಬ್ರಹತ್ ಯೋಜನೆಯನ್ನೇ ಓಡಿಸಿದವರಿಗೆ ಇದು ಅಸಾಧ್ಯದ ಸಂಗತಿಯಲ್ಲ” ಎಂದು ಒಕ್ಕೊರಲ ಅಭಿಪ್ರಾಯ ಸಭೆಯಲ್ಲಿ ಮಂಡನೆಯಾಯಿತು.