ಪವಿತ್ರಾಗೌಡ, ದರ್ಶನ್ ಜಾಮೀನು ಅರ್ಜಿ ವಜಾ – ಇಬ್ಬರಿಗೆ ಜಾಮೀನು ಮಂಜೂರು!

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ಎ1 ಆರೋಪಿ ಪವಿತ್ರಾ ಗೌಡ ಮತ್ತು ಎ2 ಆರೋಪಿ ನಟ ದರ್ಶನ್ ಗೆ ನಿರಾಶೆಯಾಗಿದ್ದು ಇವರ ಜಾಮೀನು ಅರ್ಜಿ ವಜಾಗೊಂಡಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ನ ನ್ಯಾಯಾಧೀಶರಾದ ಜೈಶಂಕರ್ ಅವರು ವಾದ-ಪ್ರತಿವಾದ ಆಲಿಸಿದರು. ಇಂದು SPP ಪ್ರಸನ್ನ ಕುಮಾರ್ ಅವರ ವಾದ ಅಂತ್ಯಗೊಂಡ ನಂತರ ಪ್ರಕರಣದ ಪೈಕಿ ಎ13 ದೀಪಕ್ ಹಾಗೂ ಎ8 ಆರೋಪಿ ರವಿಶಂಕರ್ ಗೆ ಕೋರ್ಟ್ ಜಾಮೀನು ನೀಡಿದೆ.

ಇನ್ನುಳಿದಂತೆ ನಟ ದರ್ಶನ್, ಪವಿತ್ರಾಗೌಡ, ಎ11 ನಾಗರಾಜು, ಎ12 ಲಕ್ಷ್ಮಣ್ ಜಾಮೀನು ಅರ್ಜಿ ವಜಾಗೊಂಡಿದೆ. ದರ್ಶನ್‌ ಪರವಾಗಿ ಹಿರಿಯ ವಕೀಲ ಸಿ.ವಿ.ನಾಗೇಶ್ ಹಾಗೂ ಪವಿತ್ರಾ ಗೌಡ ಪರವಾಗಿ ವಕೀಲ ಟಾಮಿ ಸೆಬಾಸ್ಟಿಯನ್ ವಾದ ಮಂಡಿಸಿದ್ದಾರೆ.

ಇನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿ ಪವಿತ್ರಾ ಗೌಡ ಜಾಮೀನು ಅರ್ಜಿ ವಜಾ ಆಗುತ್ತಿದ್ದಂತೆಯೇ ಕಣ್ಣೀರು ಹಾಕಿದ್ದಾರೆ ಎಂದು ವರದಿಯಾಗಿದೆ. ಇಂದು ಜಾಮೀನು ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಅವರು ಜೈಲಿನಲ್ಲಿ ಟಿವಿ ನೋಡುತ್ತಿದ್ದರು. ಆದರೆ ಜಾಮೀನು ಅರ್ಜಿ ವಜಾ ಆಗುತ್ತಿದ್ದಂತೆ ಮೌನಕ್ಕೆ ಶರಣಾದರು.

ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳಿಸಿದ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ದರ್ಶನ್​ ಅಂಡ್ ಗ್ಯಾಂಗ್ ಅಪಹರಿಸಿ ಬೆಂಗಳೂರಿಗೆ ಕರೆತಂದಿದ್ದರು. ಬೆಂಗಳೂರಿನ ಪಟ್ಟಣಗೆರೆ ಶೆಡ್​ನಲ್ಲಿ ರೇಣುಕಾಸ್ವಾಮಿಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿತ್ತು. ಈ ಕೇಸ್​ನಲ್ಲಿ ಪವಿತ್ರಾ ಗೌಡ ಪ್ರಮುಖ ಆರೋಪಿ ಆಗಿದ್ದು, ದರ್ಶನ್​, ವಿನಯ್​, ಪ್ರದೋಶ್​ ಸೇರಿದಂತೆ ಹಲವರು ಮೇಲೆ ಆರೋಪ ಎದುರಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!