ಸಮುದಾಯದ ಅವಹೇಳನ‌ ಸಲ್ಲದು- ಉಡುಪಿ ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘ ಸಮಿತಿ

ಉಡುಪಿ: ಕಳೆದ ಎರಡು ಮೂರು ದಿನಗಳಿಂದ ನಮ್ಮ ಮರಾಟಿ ಸಮುದಾಯದ ಉಮೇಶ್ ನಾಯ್ಕ್ ಸೂಡ ರವರು ಡಾ ಅಂಬೇಡ್ಕರ್ ಮತ್ತು ಪರಿಶಿಷ್ಟ ಜಾತಿಯವರ ಬಗ್ಗೆ ಅವಹೇಳನವಾಗಿ ಮಾತನಾಡಿದ ವಾಟ್ಸ್ಯಾಪ್ಪ್ ಸಂದೇಶಗಳು ಹರಿದಾಡಿದ ಬಗ್ಗೆ ಕೆಲವು ದಲಿತ ಸಂಘಟನೆಯ ನಾಯಕರು ಮರಾಟಿ ಸಮುದಾಯದ ಕುರಿತು ಮಾತನಾಡಿರುತ್ತಾರೆ.

ಉಮೇಶ್ ನಾಯ್ಕ್ ಸೂಡ ರವರ ಹೇಳಿಕೆಯು ಅವರ ವೈಯಕ್ತಿಕ ಹೇಳಿಕೆಯಾಗಿದ್ದು ನಮ್ಮ ಸಂಘಟನೆಗಳ ಅಥವಾ ಸಮುದಾಯದ ಹೇಳಿಕೆಯಾಗಿರುವುದಿಲ್ಲ. ನಮ್ಮ ಸಮುದಾಯವು ಸಂವಿಧಾನ ಶಿಲ್ಪಿ ಡಾ ಅಂಬೇಡ್ಕರ್ ರವರಿಗೆ ಅತೀವ ಗೌರವ ಸಲ್ಲಿಸಿಕೊಂಡು ಬಂದಿರುತ್ತದೆ. ಉಮೇಶ್ ನಾಯ್ಕ್ ಸೂಡ ರವರು ನೀಡಿದ ಹೇಳಿಕೆ ಬಗ್ಗೆ ಸಂಘವು ವಿಷಾದ ವ್ಯಕ್ತ ಪಡಿಸುತ್ತದೆ. ಆದರೆ ಅದೇ ವಿಚಾರವಾಗಿ ನಮ್ಮ ಇಡೀ ಮರಾಟಿ ಸಮುದಾಯವನ್ನು ದೂಷಿಸುವುದು ಸಮಂಜಸವಲ್ಲ. ನಮ್ಮ ಸಮಾಜಕ್ಕೆ ಸಂವಿಧಾನ ದಡಿಯಲ್ಲಿ ದೊರಕಿರುವ ಮೀಸಲಾತಿ ನಮ್ಮ ಹಕ್ಕು, ಹೊರತು ಬಿಕ್ಷೆಯಲ್ಲ. ನಮ್ಮ ಸಮುದಾಯ ಸರಕಾರದಿಂದ ದೊರಕಿರುವ ಮೀಸಲಾತಿಯನ್ನು ಸದ್ಬಳಕೆ ಮಾಡಿಕೊಂಡು ಒಂದು ಸಮಯದಲ್ಲಿ ತೀರಾ ಹಿಂದುಳಿದ ಸಮುದಾಯವು ಈಗ ಸಮಾಜದಲ್ಲಿ ಸಾಮಾಜಿಕ ಹಾಗು ಶೈಕಣಿಕವಾಗಿ ಗುರುತಿಸಿಕೊಳ್ಳಲು ಸಾಧ್ಯವಾಯಿತು.

ಕೇವಲ 3 ಶೇಕಡಾ ಮೀಸಲಾತಿಯನ್ನು ಸದ್ಬಳಕೆ ಮಾಡಿಕೊಂಡು ಸಮುದಾಯವು ಸಾಧ್ಯವಾದಷ್ಟು ಅಭಿವೃದ್ಧಿ ಹೊಂದಿದೆ. ಅದೇ ರೀತಿ ತಮಗೂ 15 ಶೇಕಡಾ ರಷ್ಟಿರುವ ಮೀಸಲಾತಿಯನ್ನು ಪಡೆದು ಅಭಿವೃದ್ಧಿ ಹೊಂದಲು ಅವಕಾಶ ದೊರಕಿರುತ್ತದೆ.

ಹೋಳಿ ಹಬ್ಬದ ಸಂದರ್ಭದಲ್ಲಿ ಮನೆ ಮನೆ ಕುಣಿಯಲು ಹೋಗಿ ಕಾಣಿಕೆ ಪಡೆಯುವುದು ನಮ್ಮ ಹಿರಿಯರು ಹಾಕಿಕೊಟ್ಟ ಧಾರ್ಮಿಕತೆಯ ಹಾದಿಯಲ್ಲಿ ಸಾಗಿದ್ದೇವೆ. ನಮ್ಮ ಸಮುದಾಯವು ಆಸ್ತಿಕ ಸಮುದಾಯವಾಗಿದ್ದು ಶ್ರೀ ದೇವಿಯ ಆರಾಧಕರಾಗಿ, ಯಾವುದೇ ಸಮುದಾಯದ ಜಾತಿಯನ್ನು ದೂಷಿಸಿಕೊಂಡು ಬಂದವರಲ್ಲ. ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ ಅನೇಕ ಸ್ಪರ್ಶ ಸಮುದಾಯಗಳು ಮೀಸಲಾತಿ ಪಡೆಯುತ್ತಿದ್ದು ಅದರಲ್ಲಿ ಮರಾಟಿ ಸಮುದಾಯ ಒಂದಾಗಿದೆ. ನಮ್ಮ ಮರಾಟಿ ಸಮುದಾಯದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಸಾಂಸ್ಕೃತಿಕ ಹಾಗು ಜೀವನ ಪದ್ದತಿಗಳನ್ನೂ ಪರಿಶೀಲನೆಗೈದು, ಗುಡ್ಡಗಾಡುಗಳ ತಪ್ಪಲಲ್ಲಿ ವಾಸಿಸಿ ಕೊಂಡಿದ್ದ ನಮ್ಮನ್ನು ಕೃಷಿ , ಕೂಲಿ ಆಧಾರಿತ ಬುಡಕಟ್ಟು ಸಮುದಾಯವೆಂದು ಸರಕಾರ “ಗಿರಿಜನರು” ಎಂದು ಗುರುತಿಸಿ ಮೀಸಲಾತಿ ನೀಡಿದೆಯೇ ಹೊರತು, ಅಕ್ರಮವಾಗಿ ಅಥವಾ ಇನ್ನೊಬ್ಬರಿಂದ ಕಸಿದುಕೊಂಡ ಸೌಲಭ್ಯ ಅಲ್ಲ ಎಂದು ಪರಿಶಿಷ್ಟ ಜಾತಿಯ ನಾಯಕರು ಅರಿತುಕೊಳ್ಳಬೇಕು ಎಂದು ಉಡುಪಿ ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!