ತಮಿಳುನಾಡು: ಭಾರೀ ಮಳೆಯ ಮುನ್ಸೂಚನೆ- ನಾಲ್ಕು ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಅ.15 ರಂದು ರಜೆ
ತಮಿಳುನಾಡು: ಭಾರಿ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ತಮಿಳುನಾಡಿನ ನಾಲ್ಕು ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಅ.15 ರಂದು ರಜೆ ಘೋಷಿಸಲಾಗಿದೆ.
ಸಿಎಂ ಎಂ.ಕೆ ಸ್ಟಾಲಿನ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಪರಿಶೀಲನಾ ಸಭೆಯ ಬಳಿಕ ಮುನ್ನೆಚ್ಚರಿಕಾ ಕ್ರಮವಾಗಿ ಚೆನ್ನೈ, ಕಾಂಚೀಪುರಂ, ತಿರುವಳ್ಳೂರು ಮತ್ತು ಚೆಂಗಲ್‌ಪೇಟ್ ಜಿಲ್ಲೆಗಳಲ್ಲಿನ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು ಜೊತೆಗೆ ಅಕ್ಟೋಬರ್ 15-18 ರವರೆಗೆ ಐಟಿ ಕಂಪೆನಿ ಉದ್ಯೋಗಿಗಳು ಮನೆಯಲ್ಲೇ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ.
ಹವಾಮಾನ ಇಲಾಖೆಯು ಅ. 14 ಮತ್ತು 17 ರ ನಡುವೆ ತಮಿಳುನಾಡಿನ ಉತ್ತರ ಕರಾವಳಿ ಜಿಲ್ಲೆಗಳಲ್ಲಿ 40 ಸೆಂ.ಮೀ ಗೂ ಹೆಚ್ಚು ಮಳೆ ಬೀಳಲಿದೆ ಎಂದು ಮುನ್ಸೂಚನೆ ನೀಡಿದೆ. ಒಂದೇ ದಿನದಲ್ಲಿ 20 ಸೆಂ.ಮೀ ಮಳೆಯಾಗುವ ಸಾಧ್ಯತೆಗಳಿದ್ದು ಇದರಿಂದ ತಗ್ಗು ಪ್ರದೇಶಗಳು ಜಲಾವೃತಗೊಳ್ಳಲಿದೆ ಎಂದು ಹೇಳಲಾಗಿದೆ.
ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅಧ್ಯಕ್ಷತೆಯಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಚೆನ್ನೈ ಕಾರ್ಪೊರೇಷನ್ ಆಯುಕ್ತರು ನಗರದಲ್ಲಿ ಭಾರೀ ಮಳೆಯನ್ನು ಎದುರಿಸಲು ಸಮಗ್ರ ಸಿದ್ಧತೆ ನಡೆಸಲಾಗಿದೆ ಎಂದು ಖಚಿತಪಡಿಸಿದ್ದಾರೆ. ಅಲ್ಲದೆ ಸಂಭಾವ್ಯ ವಿಪತ್ತುಗಳನ್ನು ನಿಭಾಯಿಸಲು ರಾಷ್ಟ್ರೀಯ ವಿಪತ್ತು ಪರಿಹಾರ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ಪರಿಹಾರ ಪಡೆಗಳನ್ನು (ಎಸ್‌ಡಿಆರ್‌ಎಫ್) ಸನ್ನದ್ಧ ಸ್ಥಿತಿಯಲ್ಲಿ ಇರಿಸಲು ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ. ತಗ್ಗು ಪ್ರದೇಶಗಳಲ್ಲಿ ದೋಣಿಗಳನ್ನು ನಿಲ್ಲಿಸುವುದು ಸೇರಿದಂತೆ ಹೆಚ್ಚುವರಿ ಕ್ರಮಗಳೊಂದಿಗೆ ತಂಡಗಳನ್ನು ದುರ್ಬಲ ಪ್ರದೇಶಗಳಿಗೆ ಮುಂಚಿತವಾಗಿ ರವಾನಿಸ ಬೇಕಾಗಿದೆ ಎಂದು ಸಭೆಯಲ್ಲಿ ನಿದರ್ಶನ ನೀಡಲಾಯಿತು.
ಆಂಧ್ರಪ್ರದೇಶದ ಶಾಲೆಗಳಿಗೆ ಇಂದು ರಜೆ…
ಆಂಧ್ರಪ್ರದೇಶದ ನೆಲೋ, ತಿರುಪತಿ, ಚಿತ್ತೂರು ಮತ್ತು ಪ್ರಕಾಶಂ ಜಿಲ್ಲೆಗಳಿಗೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಭಾರೀ ಮಳೆ ಮತ್ತು ಐಎಂಡಿ ಎಚ್ಚರಿಕೆಯ ಕಾರಣ ಇಂದು ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಗಂಜಿ ಕೇಂದ್ರ ಸ್ಥಾಪನೆ: ತಗ್ಗು ಪ್ರದೇಶದಲ್ಲಿರುವ ಜನರನ್ನು ಈ ಕೂಡಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಸೂಚಿಸಲಾಗಿದ್ದು ಜೊತೆಗೆ ಆಯಾಯ ಪ್ರದೇಶಗಳಲ್ಲಿ ಗಂಜಿ ಕೇಂದ್ರಗಳನ್ನು ತೆರೆಯುವಂತೆ ಸೂಚಿಸಲಾಗಿದೆ. ಚೆನ್ನೈನ ಉಪನಗರವಾದ ಅರೋಕ್ಕೋಣಂನಿಂದ ಎನ್‌ಡಿಆರ್‌ಎಫ್ ತಂಡವು ಸ್ಕೂಬಾ ಡೈವ್ ಕಿಟ್‌ಗಳು, ರಬ್ಬರ್ ಬೋಟ್‌ಗಳು, ಬಹು ವಿಧದ ಚೈನ್ಸಾಗಳು ಮತ್ತು ರಾಸಾಯನಿಕ ಸೋರಿಕೆಯ ನಡುವೆ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಾದ ಸೂಟ್‌ಗಳನ್ನು ಒಳಗೊಂಡ ಕಿಟ್ ಗಳನ್ನು ಪುದುಪೇಟೆಯ ಸಮುದಾಯ ಭವನದಲ್ಲಿ ಇರಿಸಲಾಗಿದೆ ಜೊತೆಗೆ ರಕ್ಷಣಾ ತಂಡವು ಸಜ್ಜುಗೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.