ಕುಂದಾಪುರ: ತಿರುಪತಿ ರೈಲಿಗೆ ಸ್ವಾಗತ
ಕುಂದಾಪುರ, ಅ.13: ಕರಾವಳಿಯ ಮೂರು ಜಿಲ್ಲೆಗಳ ಅಸಂಖ್ಯ ಯಾತ್ರಾರ್ಥಿಗಳ ಬಹುಕಾಲಗಳ ಬೇಡಿಕೆಯಾಗಿದ್ದ ತಿರುಪತಿಯನ್ನು ಸಂಪರ್ಕಿಸುವ ಕಾಚಿಗುಡ-ಮಂಗಳೂರು ಸೆಂಟ್ರಲ್ ರೈಲನ್ನು ಮುರ್ಡೇಶ್ವರದವರೆಗೆ ವಿಸ್ತರಿಸಲಾಗಿದ್ದು, ವಿಜಯ ದಶಮಿ ದಿನವಾದ ಶನಿವಾರ ಮೊದಲ ಬಾರಿ ತಿರುಪತಿಯಿಂದ ರೈಲು ಕುಂದಾಪುರಕ್ಕೆ ಆಗಮಿಸಿದಾಗ ಅದಕ್ಕೆ ಭವ್ಯ ಸ್ವಾಗತ ನೀಡಲಾಯಿತು.
ಈ ರೈಲು ಕುಂದಾಪುರಕ್ಕೆ ಬರುತ್ತಿದ್ದಂತೆ ಗಣ್ಯರು, ರೈಲು ಪ್ರಯಾಣಿಕರು ಹಾಗೂ ಸಾರ್ವಜನಿಕರು ಅದ್ಧೂರಿಯಾಗಿ ಅದನ್ನು ಸ್ವಾಗತಿಸಿ ಬರಮಾಡಿ ಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಈ ಭಾಗದ ಜನರ ಬಹುದಿನದ ಬೇಡಿಕೆ ಈಡೇರಿದೆ. ಇದು ಸಂಸದರು, ಸಚಿವರ ಪ್ರಯತ್ನ ಹಾಗೂ ರೈಲು ಪ್ರಯಾಣಿಕರ ಸಮಿತಿಯ ಹೋರಾಟದ ಫಲ. ಇದರ ಪ್ರಯೋಜನವನ್ನು ಹೆಚ್ಚಿನ ಜನರು ಪಡೆಯುವಂತಾಗಲಿ ಎಂದು ಹಾರೈಸಿದರು.
ಬಸ್ರೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ ಸ್ವಾಗತ ಕೋರಿ ಮಾತನಾಡಿ, ಬಹುದಿನಗಳ ಬೇಡಿಕೆ ಈ ದಿನ ಈಡೇರಿದೆ. ಕರಾವಳಿಯ ಬಹಳಷ್ಟು ಭಕ್ತರು ತಿರುಪತಿಗೆ ಹೋಗುತ್ತಾರೆ. ಈ ರೈಲು ಸಂಚಾರದಿಂದ ಅವರಿಗೆ ನೇರವಾಗಿ ಸಂಚರಿಸಲು ಅನುಕೂಲ ವಾಗಲಿದೆ. ಈ ಸಂದರ್ಭದಲ್ಲಿ ಕೊಂಕಣ್ ರೈಲ್ವೆ ಆರಂಭಿಸಿದ ಜಾರ್ಜ್ ಫೆರ್ನಾಂಡಿಸ್ ಅವರನ್ನು ನಾವೆಲ್ಲ ಸ್ಮರಿಸಬೇಕು ಎಂದರು.
ಕುಂದಾಪುರದ ಪೇಟೆ ಶ್ರೀವೆಂಕಟರಮಣ ದೇಗುಲದ ಮ್ಯಾನೇಜಿಂಗ್ ಟ್ರಸ್ಟಿ ರಾಧಾಕೃಷ್ಣ ಶೆಣೈ, ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ, ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಸುರೇಶ್ ಬೆಟ್ಟಿನ್, ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗಣೇಶ್ ಪುತ್ರನ್, ಉಪಾಧ್ಯಕ್ಷರಾದ ರಾಜೇಶ್ ಕಾವೇರಿ, ಪದ್ಮನಾಭ ಶೆಣೈ, ಸಂಚಾಲಕ ವಿವೇಕ್ ನಾಯಕ್, ಸದಸ್ಯರಾದ ಪ್ರವೀಣ್ ಕುಮಾರ್, ಗೌತಮ್ ಶೆಟ್ಟಿ, ಜಾಯ್ ಕರ್ವಾಲೋ, ಸುಧಾಕರ ಶೆಟ್ಟಿ ಹುಂತ್ರಿಕೆ, ನಾಗರಾಜ ಆಚಾರ್, ರಾಘವೇಂದ್ರ ಶೇಟ್, ಉದಯ ಭಂಡಾರ್ಕರ್, ಧರ್ಮಪ್ರಕಾಶ್, ರೋಟರಿ ಕ್ಲಬ್‌ನ ಕೆ.ಕೆ. ಕಾಂಚನ್, ಗಣಪತಿ ಟಿ. ಶ್ರೀಯಾನ್, ರೆಡ್‌ಕ್ರಾಸ್‌ನ ಶಿವರಾಮ ಶೆಟ್ಟಿ, ಲಯನ್ಸ್ ಕ್ಲಬ್‌ನ ಏಕನಾಥ ಬೋಳಾರ್, ಕ್ಲೀನ್ ಕುಂದಾಪುರದ ಕಲ್ಪನಾ ಭಾಸ್ಕರ್, ಸರಸ್ವತಿ ಪುತ್ರನ್, ಭಾಸ್ಕರ ಪೂಜಾರಿ, ಬಿಜೆಪಿ ಪ್ರಮುಖರಾದ ಪೃಥ್ವಿರಾಜ್ ಬಿಲ್ಲಾಡಿ, ಸೌರಭಿ ಪೈ ಮೊದಲಾದವರಿದ್ದರು.