ಮುಂಬೈ: ಡಿಸಿಎಂ ಅಜಿತ್ ಪವಾರ್ ಆಪ್ತ, ಮಾಜಿ ಸಚಿವ ಬಾಬಾ ಸಿದ್ದಿಕಿಗೆ ಗುಂಡಿಕ್ಕಿ ಬರ್ಬರ ಹತ್ಯೆ
ಮುಂಬೈ: ವಿಧಾನಸಭೆ ಚುನಾವಣೆ ರಂಗೇರುವ ಮೊದಲೇ ಮಹಾರಾಷ್ಟ್ರದಲ್ಲಿ ಗುಂಡಿನ ಸದ್ದಿಗೆ ಮಾಜಿ ಸಚಿವ ಬಲಿಯಾಗಿದ್ದಾರೆ.
ಶನಿವಾರ ರಾತ್ರಿ ನಗರದ ಬಾಂದ್ರಾ ಪ್ರದೇಶದಲ್ಲಿ ಎನ್‌ಸಿಪಿ ಅಜಿತ್ ಪವಾರ್ ಬಣದ ನಾಯಕ ಬಾಬಾ ಸಿದ್ದಿಕಿ ಮೇಲೆ ಗುಂಡು ಹಾರಿಸಲಾಗಿದ್ದು, ಗುಂಡಿನ ದಾಳಿಯ ನಂತರ ಬಾಬಾ ಸಿದ್ದಿಕಿ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವೈದ್ಯರು ಸಿದ್ದಿಕಿ ಮೃತಪಟ್ಟಿರುವುದಾಗಿ ಘೋಷಿಸಿದರು. ಬಾಬಾ ಸಿದ್ದಿಕಿ ಅವರ ಕಚೇರಿ ಬಳಿಯೇ ಗುಂಡು ಹಾರಿಸಲಾಗಿದೆ. ಪೊಲೀಸರು ಇದುವರೆಗೆ ಇಬ್ಬರು ಹಂತಕರನ್ನು ವಶಕ್ಕೆ ಪಡೆದಿದ್ದು, ಮತ್ತೋರ್ವನಿಗಾಗಿ ಶೋಧ ನಡೆಸುತ್ತಿದ್ದಾರೆ.
ಮಾಹಿತಿ ಪ್ರಕಾರ, 15 ದಿನಗಳ ಹಿಂದೆ ಬಾಬಾ ಸಿದ್ದಿಕಿಗೆ ಜೀವ ಬೆದರಿಕೆ ಬಂದಿತ್ತು. ಇದರ ಬೆನ್ನಲ್ಲೇ ಅವರನ್ನು ನಡುರಸ್ತೆಯಲ್ಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಹಾಗೂ ಹರಿಯಾಣ ಮೂಲದ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ಮಹಾರಾಷ್ಟ್ರದ ರಾಜಕೀಯದಲ್ಲಿ ಬಾಬಾ ಸಿದ್ದಿಕಿ ದೊಡ್ಡ ಹೆಸರು. ಮಾಜಿ ಸಚಿವರಾಗಿರುವ ಅವರು ಮೂರು ಬಾರಿ ಶಾಸಕರಾಗಿದ್ದರು. ಬಾಂದ್ರಾ ಪೂರ್ವ ಭಾಗದಲ್ಲಿ ಬಾಬಾ ಸಿದ್ದಿಕಿ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು, ನಿರ್ಮಲ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನೆಯ ಬಗ್ಗೆ ಮಾಹಿತಿ ಲಭಿಸಿದ ತಕ್ಷಣ ಮುಂಬೈ ಅಪರಾಧ ವಿಭಾಗದ ತಂಡಗಳು ಸ್ಥಳಕ್ಕೆ ಧಾವಿಸಿವೆ. ಈ ಪ್ರಕರಣದಲ್ಲಿ ಇಬ್ಬರು ಶೂಟರ್‌ಗಳನ್ನು ಬಂಧಿಸಲಾಗಿದೆ. ಶೂಟರ್‌ಗಳು ಸಿದ್ದಿಕಿ ಮೇಲೆ ಆರು ಸುತ್ತು ಗುಂಡು ಹಾರಿಸಿದ್ದು, ಮೂರು ಗುಂಡುಗಳು ಸಿದ್ದಿಕಿ ದೇಹ ಸೇರಿದ್ದವು.
ಬಾಬಾ ಸಿದ್ದಿಕಿ ಸಾವಿನ ಸುದ್ದಿ ತಿಳಿದ ನಂತರ ಬಾಲಿವುಡ್ ನಾಯಕ ಸಲ್ಮಾನ್ ಖಾನ್ ಕೂಡ ಲೀಲಾವತಿ ಆಸ್ಪತ್ರೆಗೆ ಆಗಮಿಸುತ್ತಿದ್ದು ಸಲ್ಮಾನ್ ಖಾನ್ ಮತ್ತು ಬಾಬಾ ಸಿದ್ದಿಕಿ ಆಪ್ತರಾಗಿದ್ದಾರೆ. ಅಲ್ಲದೆ 2013ರಲ್ಲಿ ನಟ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ನಡುವಿನ ಮನಸ್ತಾಪವನ್ನು ದೂರ ಮಾಡಿ ಇಬ್ಬರನ್ನು ಒಂದಾಗಿಸಿದ್ದರು.
ಬಾಬಾ ಸಿದ್ದಿಕಿ ಹತ್ಯೆಯ ನಂತರ ಶಿವಸೇನೆ (ಯುಬಿಟಿ) ದಾಳಿ ನಡೆಸಿದೆ. ಪಕ್ಷದ ವಕ್ತಾರ ಆನಂದ್ ದುಬೆ ಮಾತನಾಡಿ, ನಮ್ಮ ನಗರ ಮುಂಬೈನಲ್ಲಿ ಮಾಜಿ ಶಾಸಕರು ಸುರಕ್ಷಿತವಾಗಿಲ್ಲದಿದ್ದರೆ, ಸರ್ಕಾರಿ ನಾಯಕರು ಸುರಕ್ಷಿತವಾಗಿಲ್ಲದಿದ್ದರೆ, ಈ ಸರ್ಕಾರವು ಸಾಮಾನ್ಯ ಜನರನ್ನು ಹೇಗೆ ರಕ್ಷಿಸುತ್ತದೆ? ಅವರು ತಮ್ಮ ಶಾಸಕರು ಮತ್ತು ಮಾಜಿ ಸಚಿವರನ್ನು ಸುರಕ್ಷಿತವಾಗಿರಿ ಸಲು ಸಾಧ್ಯವಾಗದಿದ್ದರೆ, ಗೃಹ ಸಚಿವ ದೇವೇಂದ್ರ ಫಡ್ನವಿಸ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.