ರೈತರಿಗಾಗಿ ರಾಜ್ಯ ಸರ್ಕಾರ ಏನನ್ನೂ ಮಾಡಿಲ್ಲ- ಸ್ವಪಕ್ಷದ ವಿರುದ್ಧವೇ ಹರಿಹಾಯ್ದ ಕಾಂಗ್ರೆಸ್ ಶಾಸಕ!
ಬೆಳಗಾವಿ: ರಾಜ್ಯ ಸರ್ಕಾರ ರೈತರಿಗಾಗಿ ಏನನ್ನೂ ಮಾಡಿಲ್ಲ ಎಂದು ಕಾಂಗ್ರೆಸ್ ಶಾಸಕ ರಾಜು ಕಾಗೆ ಸ್ವಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ. ಕಳೆದ ಒಂದು ವರ್ಷದಿಂದ ಇದನ್ನು ಅವರು ಹೇಳುತ್ತಾ ಬಂದಿದ್ದಾರೆ. ರಾಜ್ಯದಲ್ಲಿ ರೈತರ ಉಳಿವಿಗಾಗಿ ಯಾವುದೇ ಯೋಜನೆಗಳನ್ನು ಜಾರಿಗೆ ತಂದಿಲ್ಲ ಎಂದು ಆರೋಪಿಸಿರುವ ಅವರು, ರೈತರ ಸಮಸ್ಯೆಗಳಿಗಾಗಿ ಬೆಂಗಳೂರಿನಲ್ಲಿರುವ ವಿಧಾನಸೌಧದಲ್ಲಿ ತಮ್ಮ ಜೀವ ಕಳೆದುಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.
ಕಾಗವಾಡ ಕ್ಷೇತ್ರದ ತವಾಸಿ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜು ಕಾಗೆ, ರೈತರಿಗಾಗಿ ಯಾವುದೇ ಯೋಜನೆಗಳನ್ನು ಜಾರಿಗೆ ತರುತ್ತಿಲ್ಲ, ಇದನ್ನು ನೀವು ಅರ್ಥಮಾಡಿಕೊಳ್ಳಬೇಕು. ನಾನು ನಿಮಗೆ ಸುಳ್ಳು ಹೇಳಿ ನಾಟಕ ಮಾಡಬೇಕೇ? ಅಕ್ಕಿ ಮತ್ತು ಇತರ ಬೆಳೆಗಳು ಬೆಳೆಯದಿದ್ದರೆ ದೇಶ ಏನು ತಿನ್ನುತ್ತದೆ? ನಾವು ನೋಟುಗಳನ್ನು ತಿನ್ನಬೇಕೇ? ಎಂದು ಪ್ರಶ್ನಿಸಿದ ಅವರು, ಮೊದಲು ರೈತರು ಬದುಕಲು ಸಹಾಯ ಮಾಡಿ ಎಂದರು.
ರೈತರು ಬದುಕಿದಾಗ ಮಾತ್ರ ಈ ದೇಶ ಪ್ರಗತಿ ಹೊಂದಲು ಸಾಧ್ಯ ಎಂದು ಹೇಳಿದ ಶಾಸಕರು, ಕಳೆದ ಒಂದು ವರ್ಷದಿಂದ ಇದೇ ತಮ್ಮ ಕೂಗಾಗಿದೆ. ರೈತರ ಕಾರಣಕ್ಕಾಗಿ ವಿಧಾನಸೌಧದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಕೂಡ ಹೇಳಿದ್ದೆ. ನಿಮ್ಮ ಕೆಲಸ ಮಾಡಲು ಸಿದ್ಧರಾಗಿರುವಾಗ ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತೀರಿ ಎಂದು ಸಚಿವರು ನನಗೆ ಹೇಳಿದ್ದರು ಎಂದು ಅವರು ತಿಳಿಸಿದರು.