ಉಡುಪಿ: ಬಡ ವಿದ್ಯಾರ್ಥಿಗಳಿಗೆ ರೂ.41 ಲಕ್ಷ ನೆರವು ವಿತರಣೆ
ಉಡುಪಿ : ಅನಿವಾಸಿ ಭಾರತೀಯ ಹಾಗೂ ‘ವಿಶನ್ ಕೊಂಕಣಿ’ ಪ್ರವರ್ತಕ ಮೈಕಲ್ ಡಿಸೋಜಾ ಮತ್ತು ಕುಟುಂಬದವರಿಂದ ಉಡುಪಿ ಧರ್ಮಪ್ರಾಂತ್ಯದ ಸಾಮಾಜಿಕ ಹಾಗೂ ಸೇವಾ ಸಂಘಟನೆ ಸಂಪದ ನೇತೃತ್ವದಲ್ಲಿ ಸ್ಥಾಪಿಸಲ್ಪಟ್ಟ ‘ಎಜುಕೇರ್ ಎಂಡೋಮೆಂಟ್ ಫಂಡ್’ ಇದರ ಚಾಲನೆಯನ್ನು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಡ್ಡಿ ರಹಿತ ಸಾಲ ರೂಪದ ನೆರವನ್ನು ಹಸ್ತಾಂತರಿಸುವ ಮೂಲಕ ಶುಕ್ರವಾರ ಕಕ್ಕುಂಜೆ ಅನುಗ್ರಹ ಪಾಲನಾ ಕೆಂದ್ರದಲ್ಲಿ ಚಾಲನೆ ನೀಡಲಾಯಿತು.
ಈ ವೇಳೆ ಮಾತನಾಡಿದ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ನಮ್ಮ ಓದಿಗೆ ಸಹಾಯ ಮಾಡಿದವರನ್ನು ಮರೆಯದೆ ನಾವು ಒಳ್ಳೆಯ ಸ್ಥಾನಕ್ಕೆ ಬಂದಾಗಿ ಕಷ್ಟದಲ್ಲಿರುವ ಇನ್ನೊಬ್ಬರಿಗೆ ಸಹಾಯ ಮಾಡುವ ಮೂಲಕ ಋಣ ತೀರಿಸಬೇಕು. ನೆರವು ಪಡೆದ ವಿದ್ಯಾರ್ಥಿಗಳು ತಮಗೆ ಉದ್ಯೋಗ ದೊರಕಿದ ಬಳಿಕ ಅದನ್ನು ಮರುಪಾವತಿಸುವ ಮೂಲಕ ಸಮಾಜದ ಇನ್ನಷ್ಟು ವಿದ್ಯಾರ್ಥಿಗಳಿಗೆ ನೆರವು ನೀಡುವ ಈ ಯೋಜನೆ ಪ್ರೇರಣದಾಯಿ. ಶ್ರದ್ಧೆ, ಪ್ರಾಮಾಣಿಕತೆ ಹಾಗೂ ಸತತ ಪ್ರಯತ್ನಗಳಿಂದ ಜೀವನದ ಯಶಸ್ಸಿನ ಸಾಧನೆಗಳ ಮೆಟ್ಟಿಲೇರಲು ಸಾಧ್ಯ. ಹೀಗಾಗಿ ವಿದ್ಯಾರ್ಥಿ ಜೀವನದಲ್ಲಿ ಸಮಯ ವ್ಯರ್ಥ ಮಾಡದೇ ಉತ್ತಮವಾಗಿ ಓದಿ ಸಾಧನೆ ತೋರಬೇಕು. ವಿದ್ಯಾರ್ಥಿಗಳು ಸ್ಮರ್ಧಾತ್ಮಕ ಮನಗುಣ ಬೆಳಿಸಿಕೊಂಡು ಜೀವನದಲ್ಲಿ ಸದಾ ಪ್ರಥಮಶಾಲಿಯಾಗ ಬೇಕು ಎಂದರು.
ಸಾಂಕೇತಿಕವಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಬಡ್ಡಿ ರಹಿತ ಸಾಲ ರೂಪದ ನೆರವನ್ನು ಹಸ್ತಾಂತರಿಸಿ ಮಾತನಾಡಿದ ಉದ್ಯಮಿ ಹಾಗೂ ದಾನಿ ಮೈಕಲ್ ಡಿಸೋಜಾ ಶಿಕ್ಷಣ ಮಾನವನ ಆರ್ಥಿಕ ವ್ಯವಸ್ಥೆಯನ್ನು ಬದಲಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆರ್ಥಿಕ ಅಡಚಣೆಯಿಂದಾಗಿ ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗದಂತೆ ಬಡ ಮಕ್ಕಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಈ ಕಾರ್ಯವನ್ನುಮಾಡಲಾಗುತ್ತಿದೆ. ದೇವರು ನಮಗೆ ನೀಡಿರುವ ಸಂಪತ್ತನ್ನು ಅಗತ್ಯವಿದ್ದವ ರೊಂದಿಗೆ ಹಂಚಿಕೊಂಡಾಗ ಸಿಗುವ ತೃಪ್ತಿ ಬೇರೆ ಎಲ್ಲಿಯೂ ಕೂಡ ಸಿಗುವುದಿಲ್ಲ. ಪ್ರತಿಯೊಬ್ಬರೂ ಕೂಡ ತನ್ನ ಜೀವನದಲ್ಲಿ ಎಂದಿಗೂ ತನ್ನ ತಾಯಿ, ಮಾತೃ ಭಾಷೆ ಹಾಗೂ ಹುಟ್ಟಿದ ಊರನ್ನು ಎಂದಿಗೂ ಕೂಡ ಮರೆಯ ಬಾರದು ಎಂದರು.
ಕಾರ್ಯಕ್ರಮದಲ್ಲಿ ‘ಎಜುಕೇರ್ ಎಂಡೋಮೆಂಟ್ ಫಂಡ್’ಇದರ ಸಲಹೆಗಾರರಾದ ವಂ|ವಲೇರಿಯನ್ ಡಿಸೋಜಾ, ಸದಸ್ಯರುಗಳಾದ ಸ್ಟೀಫನ್ ಪಿಂಟೊ, ಓಸ್ವಲ್ಡ್ ರೊಡ್ರಿಗಸ್, ಪ್ರೋ.ಲೈನಲ್ ಆರಾನ್ಹಾ, ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ, ಸಿಒಡಿಪಿ ಸಂಸ್ಥೆಯ ವಂ|ಲಾರೆನ್ಸ್ ಕುಟಿನ್ಹಾ, ಸಂಪದ ಸಂಸ್ಥೆಯ ಡಾ|ಎವ್ಜಿನ್ ಡಿಸೋಜಾ, ಡಾ|ಗ್ರೈನಲ್ ಡಿಮೆಲ್ಲೊ ಉಪಸ್ಥಿತರಿದ್ದರು.
ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಸ್ವಾಗತಿಸಿ, ಸಂಪದ ಸಂಸ್ಥೆಯ ಸದಸ್ಯರಾದ ಜಾನೆಟ್ ಬಾರ್ಬೊಜಾ ವಂದಿಸಿದರು. ನಿರ್ದೇಶಕರಾದ ವಂ|ರೆಜಿನಾಲ್ಡ್ ಪಿಂಟೊ ಕಾರ್ಯಕ್ರಮ ನಿರೂಪಿಸಿದರು.
ಕಳೆದ 12 ವರ್ಷಗಳಲ್ಲಿ ಉಡುಪಿ ಧರ್ಮಪ್ರಾಂತ್ಯದ 1157 ವಿದ್ಯಾರ್ಥಿಗಳು ರೂ 5,60,39,500 ನೆರವನ್ನು ಅಶಕ್ತ ವಿದ್ಯಾರ್ಥಿಗಳು ಸಾಲರೂಪದಲ್ಲಿ ಪಡೆದಿದ್ದು, ಶುಕ್ರವಾರ 49 ವಿದ್ಯಾರ್ಥಿಗಳು ರೂ 41,05,500 ನೆರವನ್ನು ಸ್ವೀಕರಿಸಿದರು. 2024 ನೇ ಸಾಲಿಗೆ 18 ಎಂಜಿನಿಯರಿಂಗ್, 10 ಅಲೈಡ್ ಹೆಲ್ತ್ ಸೈಯನ್ಸ್, 8 ನರ್ಸಿಂಗ್, 7 ಪದವಿ, 3 ಸ್ನಾತಕೋತ್ತರ ಪದವಿ, 2 ಎಮ್ ಬಿ ಬಿ ಎಸ್, 1 ಮಾಸ್ಟರ್ಸ್ ಇನ್ ಫಾರ್ಮಸಿ ವಿದ್ಯಾರ್ಥಿಗಳಿಗೆ ನೆರವು ನೀಡಲಾಗಿದೆ.
ನೆರವು ಪಡೆಯುವ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಒಂದೂವರೆ ವರ್ಷದಲ್ಲಿ ನೆರವನ್ನು ಹಿಂತಿರುಗಿಸುವ ವಾಗ್ದಾನದೊಂದಿಗೆ ನೆರವನ್ನು ನೀಡಲಾಗುತ್ತದೆ. ಈ ಮೂಲಕ ಸಮಾಜದ ಇನ್ನಷ್ಟು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣ ನೆರವಾಗುವ ವಿನೂತನ ಯೋಜನೆ ಇದಾಗಿದೆ.