ಉಪ ಚುನಾವಣೆಯಲ್ಲಿ ಗೆಲುವಿನ ವಿಶ್ವಾಸ: ಮಂಜುನಾಥ ಭಂಡಾರಿ

ಉಡುಪಿ: ಗ್ರಾಮ ಪಂಚಾಯತ್ ಸದಸ್ಯರೇ ಪ್ರಮುಖ ಮತದಾರರಾಗಿರುವ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಚುನಾವಣಾ ಕ್ಷ್ರೇದಿಂದ ಕರ್ನಾಟಕ ವಿಧಾನಪರಿಷತ್‌ಗೆ ಅ.21ರಂದು ನಡೆಯುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಪೂರಕ ವಾತಾವರಣವಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದ್ದಾರೆ.

ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಗ್ರಾಪಂ ಮಟ್ಟದಿಂದ ತಾಪಂ, ಜಿಪಂವರೆಗೆ ಜನರಿಂದ ಚುನಾಯಿತರಾಗಿರುವ ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ ಅವರು ತಳಮಟ್ಟದಿಂದ ರಾಜಕೀಯ ಅನುಭವ ಪಡೆದವರು. ಜನರೊಂದಿಗೆ ಸದಾ ಇದ್ದವರು. ಹೀಗಾಗಿ ಎದುರಾಳಿ ಅಭ್ಯರ್ಥಿಗೆ ಹೋಲಿಸಿದರೆ ಅವರು ವಿಧಾನಪರಿಷತ್ ಸದಸ್ಯರಾಗಲು ನಿಜವಾಗಿಯೂ ಅರ್ಹರು ಎಂದರು.

ಪಕ್ಷ ಕ್ಷೇತ್ರದ ಉದ್ದಗಲಕ್ಕೂ 4-5 ಬಾರಿ ಸಂಚರಿಸಿ ಕಾರ್ಯಕರ್ತರ, ನಾಯಕರ ಅಭಿಪ್ರಾಯ ಪಡೆದು ರಾಜು ಪೂಜಾರಿ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಅವರೊಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಜನಪ್ರತಿನಿಧಿಯಾಗಿ ಅವರು ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ಯುವ ಗುಣಹೊಂದಿದ್ದಾರೆ ಎಂದರು.

ಈ ಚುನಾವಣೆಯಲ್ಲಿ ಒಟ್ಟು 6000 ಮತದಾರರಿದ್ದಾರೆ. ಹೀಗಾಗಿ ಗೆಲುವಿಗೆ ಕನಿಷ್ಠ 3000 ಮತಗಳಿಸ ಬೇಕಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಮಗೆ ಸುಮಾರು 2000 ಮತಗಳಿವೆ. ಗ್ರಾಪಂ ಸದಸ್ಯರು ಪಕ್ಷಾತೀತ ನೆಲೆಯಲ್ಲಿ ಆಯ್ಕೆಯಾಗುವು ದರಿಂದ ಅವರ ಬೆಂಬಲ ಪಡೆಯುವ ನಿರೀಕ್ಷೆ ಇದೆ ಎಂದರು.

ರಾಜು ಪೂಜಾರಿ ಅವರನ್ನು ಗೆಲ್ಲಿಸುವ ಜವಾಬ್ದಾರಿಯನ್ನು ರಾಜ್ಯ ಕಾಂಗ್ರೆಸ್ ಉಭಯ ಜಿಲ್ಲೆಯ ನಾಯಕರಿಗೆ ನೀಡಿದೆ. ಹೀಗಾಗಿ ಈಗಾಗಲೇ ಪ್ರತಿ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಕಾರ್ಯಕರ್ತರು ಹಾಗೂ ಸ್ಥಳೀಯ ನಾಯಕರ ಸಭೆ ನಡೆಸಿದ್ದೇವೆ. ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಸಭೆಗಳನ್ನು ನಡೆಸಲಾಗಿದೆ. ನಾಳೆಯಿಂದ ಎರಡು ದಿನ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಸಭೆ ನಡೆಯಲಿದೆ ಎಂದು ಭಂಡಾರಿ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ದಿನೇಶ್ ಗುಂಡೂ ರಾವ್ ಅವರ ನೇತೃತ್ವದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಭೆ ನಡೆಯಲಿದೆ. ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವರೂ ದಸರಾ ಮುಗಿದ ಬಳಿಕ ಪ್ರಚಾರ ನಡೆಸಲಿದ್ದಾರೆ ಎಂದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಯಾವುದೇ ಚಿನ್ಹೆ ಇಲ್ಲದೇ ಚುನಾವಣೆ ನಡೆಯುವುದ ರಿಂದ ಗ್ರಾಪಂ ಸದಸ್ಯರ ಮತಕ್ಕೆ ನಾವು ವಿಶೇಷ ಒತ್ತು ನೀಡುತ್ತೇವೆ. ನಮ್ಮದೇ ಪಕ್ಷದ ಸರಕಾರವಿರುವುದ ರಿಂದ ನಮಗೆ ಗೆಲ್ಲುವ ಅವಕಾಶವಿದೆ ಎಂದರು.

ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಈಗಾಗಲೇ ಜಿಪಂ ಅಧ್ಯಕ್ಷರಾಗಿ ಉತ್ತಮ ಸಾಧನೆ ತೋರಿ ರುವ ರಾಜು ಪೂಜಾರಿ ಅವರು ಶಾಸಕರಾಗಿಯೂ ಉತ್ತಮ ಕೆಲಸ ಮಾಡುವ ಸಾಮರ್ಥ್ಯ ಹೊಂದಿರುವುದರಿಂದ ಅವರ ಆಯ್ಕೆ ಸಮರ್ಥನೀಯ ಎಂದರು.

ಅಭ್ಯರ್ಥಿ ರಾಜು ಪೂಜಾರಿ ಮಾತನಾಡಿ, 35 ವರ್ಷಗಳಿಂದ ಗ್ರಾಪಂ, ತಾಪಂ, ಜಿಪಂ ಸದಸ್ಯನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಅನುಭವವಿದ್ದು, ಇದೀಗ ಪಕ್ಷ ಗುರುತಿಸಿ ಮನ್ನಣೆ ನೀಡಿದೆ. ಸ್ಥಳೀಯ ಸಂಸ್ಥೆಗಳ ಸಮಸ್ಯೆ ಅರಿವಿದ್ದು, ಸಂಖ್ಯಾ ಬಲ ಏನೇ ಇದ್ದರೂ, ಸದಸ್ಯರ ಬೆಂಬಲ ಗಳಿಸುವ ವಿಶ್ವಾಸವಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಅಶೋಕ್‌ಕುಮಾರ್ ಕೊಡವೂರು, ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಕೆಪಿಸಿಸಿ ಉಪಾಧ್ಯಕ್ಷ ಎಂ.ಎಸ್.ಮಹಮ್ಮದ್, ಮಲ್ಯಾಡಿ ಶಿವರಾಮ್ ಶೆಟ್ಟಿ, ಪ್ರಸಾದ್‌ರಾಜ್ ಕಾಂಚನ್, ಗೀತಾ ವಾಗ್ಳೆ, ರಮೇಶ್ ಕಾಂಚನ್, ಅಣ್ಣಯ್ಯ ಶೇರಿಗಾರ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!