ಖ್ಯಾತ ಉದ್ಯಮಿ ರತನ್‌ ಟಾಟಾ ಇನ್ನು ನೆನಪು ಮಾತ್ರ

ಮುಂಬೈ: ಭಾರತದ ಅತಿ ದೊಡ್ಡ ಸಮೂಹ ಸಂಸ್ಥೆ ಟಾಟಾ ಸನ್ಸ್ ನ ಗೌರವಾಧ್ಯಕ್ಷ ರತನ್ ಟಾಟಾ ಬುಧವಾರ ರಾತ್ರಿ ನಿಧನರಾಗಿದ್ದಾರೆ.

86 ವರ್ಷದ ರತನ್ ಟಾಟಾ ಅವರು ತಮ್ಮ ವೃದ್ಧಾಪ್ಯ ಸಂಬಂಧಿ ಕಾಯಿಲೆಗಳಿಗೆ ಸೋಮವಾರ ಚಿಕಿತ್ಸೆಗೊಳಗಾಗಿದ್ದರು. ಇಂದು ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು.

1991ರಲ್ಲಿ ಟಾಟಾ ಸನ್ಸ್ ಸಮೂಹ ಸಂಸ್ಥೆಯ ಅಧ್ಯಕ್ಷರಾಗಿದ್ದ ರತನ್ ಟಾಟಾ, ತಮ್ಮ ಸಂಸ್ಥೆಯನ್ನು 100 ಬಿಲಿಯನ್ ಡಾಲರ್ ಮೌಲ್ಯದ ಜಾಗತಿಕ ದರ್ಜೆಯ ಸಾಮ್ರಾಜ್ಯವನ್ನಾಗಿ ವಿಸ್ತರಿಸಿದ್ದರು. ಡಿಸೆಂಬರ್ 2012ರಲ್ಲಿ ಟಾಟಾ ಸನ್ಸ್ ಸಮೂಹ ಸಂಸ್ಥೆಯ ಅಧ್ಯಕ್ಷ ಹುದ್ದೆಯಿಂದ ನಿವೃತ್ತರಾಗಿದ್ದ ರತನ್ ಟಾಟಾ, ನಂತರ ಗೌರವಾಧ್ಯಕ್ಷರಾಗಿ ನೇಮಕಗೊಂಡಿದ್ದರು.

ರತನ್ ಟಾಟಾ ನಿಧನಕ್ಕೆ ಅವರ ಟಾಟಾ ಗ್ರೂಪ್ ಮತ್ತು ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿದ್ದು, ಇದು ‘ತುಂಬಲಾರದ ನಷ್ಟ’ ಎಂದು ಹೇಳಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಟಾಟಾ ಗ್ರೂಪ್ ಮುಖ್ಯಸ್ಥ ಎನ್.ಚಂದ್ರಶೇಖರನ್ ಅವರು, ‘ತುಂಬಾ ನೋವಿನಿಂದ ನಾವು ರತನ್ ಟಾಟಾ ಅವರಿಗೆ ವಿದಾಯ ಹೇಳಬೇಕಿದೆ. ಇದು ನಮಗೆ ‘ತುಂಬಲಾರದ ನಷ್ಟ’ವಾಗಿದ್ದು, ರತನ್ ಟಾಟಾ ಅವರು, ಕೇವಲ ಟಾಟಾ ಸಮೂಹವನ್ನೇಷ್ಟೇ ಅಲ್ಲ.. ದೇಶಕ್ಕಾಗಿ ಅಳೆಯಲಾಗದ ಕೊಡುಗೆಗಳನ್ನು ರೂಪಿಸಿದ ನಿಜವಾದ ಅಸಾಮಾನ್ಯ ನಾಯಕ ಎಂದಿದ್ದಾರೆ.

ಅಂತೆಯೇ ರತನ್ ಟಾಟಾ ಅವರು ಟಾಟಾ ಗ್ರೂಪ್ ಗೆ ಅಧ್ಯಕ್ಷರಿಗಿಂತ ಹೆಚ್ಚು. ನನಗೆ, ಅವರು ಓರ್ವ ಮಾರ್ಗದರ್ಶಕ, ಮಾರ್ಗದರ್ಶಿ ಮತ್ತು ಸ್ನೇಹಿತ. ಅವರು ತಮ್ಮ ಉದಾತ್ತ ಕೆಲಸಗಳ ಮೂಲಕ ನನ್ನಂತಹ ಸಾಕಷ್ಟು ಮಂದಿಗೆ ಸ್ಫೂರ್ತಿಯಾಗಿದ್ದಾರೆ. ಅವರ ಅಡಿಯಲ್ಲಿ ಟಾಟಾ ಗ್ರೂಪ್‌ ಒಂದು ಅಚಲ, ಶ್ರೇಷ್ಠತೆ, ಸಮಗ್ರತೆ ಮತ್ತು ನಾವೀನ್ಯ ಮಾರ್ಗದಲ್ಲಿ ಸಾಗಿದೆ.

ಟಾಟಾ ಅವರು ಲೋಕೋಪಕಾರ ಮತ್ತು ಸಮಾಜದ ಅಭಿವೃದ್ಧಿಗೆ ಸಮರ್ಪಣೆ ಹೊಂದಿದ್ದರು. ಅವರ ಮಹತ್ಕಾರ್ಯಗಳು ಲಕ್ಷಾಂತರ ಜನರ ಜೀವನವನ್ನು ಮುಟ್ಟಿತು. ಶಿಕ್ಷಣದಿಂದ ಆರೋಗ್ಯದವರೆಗೆ ಅವರ ಉಪಕ್ರಮಗಳು ಮುಂದಿನ ಪೀಳಿಗೆಗೆ ಪ್ರಯೋಜನವಾ ಗುವಂತಹ ಆಳವಾದ ಬೇರೂರಿರುವ ಗುರುತಾಗಿದೆ ಎಂದು ಹೇಳಿದ್ದಾರೆ.

ಖ್ಯಾತ ಉದ್ಯಮಿ ರತನ್ ಟಾಟಾ ನಿಧನಕ್ಕೆ ದೇಶದ ಗಣ್ಯಾತಿಗಣ್ಯರು ಸಂತಾಪ ಸೂಚಿಸಿದ್ದು, ‘ದೂರದೃಷ್ಟಿಯ ವ್ಯಕ್ತಿ’ ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ‘ದೇಶದ ಹೆಮ್ಮೆಯ ಉದ್ಯಮಿ, ಟಾಟಾ ಸಮೂಹದ ಮುಖ್ಯಸ್ಥರಾದ ರತನ್ ಟಾಟಾ ಅವರ ನಿಧನದ ಸುದ್ದಿ ದುಃಖವುಂಟುಮಾಡಿದೆ. ಟಾಟಾ ಸಂಸ್ಥೆಯ ಮೂಲಕ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ್ದು ಮಾತ್ರವಲ್ಲ, ಭಾರತದ ಉದ್ಯಮ ವಲಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ದ ದೂರದೃಷ್ಟಿಯ ವ್ಯಕ್ತಿ. ರತನ್ ಟಾಟಾ ಅವರು ತಮ್ಮ ಬದುಕು ಮತ್ತು ಸಾಧನೆಗಳ ಮೂಲಕ ಅಜರಾಮರ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!