ನಿತೀಶ್ ಕುಮಾರ್ ಗೆ ಒಲಿದ ಬಿ’ಹಾರ’: ಸತತ ನಾಲ್ಕನೇ ಬಾರಿ ಮುಖ್ಯಮಂತ್ರಿ ಪಟ್ಟ
ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಕೂಡ ಪ್ರಧಾನಿ ನರೇಂದ್ರ ಮೋದಿ ಮೋಡಿ ಮಾಡಿದ್ದಾರೆ. ಎನ್ ಡಿಎ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಸಿಕ್ಕಿದೆ. ಒಟ್ಟು 243 ವಿಧಾನಸಭಾ ಕ್ಷೇತ್ರಗಳಲ್ಲಿ 125 ಕ್ಷೇತ್ರಗಳನ್ನು ಗೆದ್ದಿದ್ದು ಸತತ ನಾಲ್ಕನೇ ಬಾರಿ ನಿತೀಶ್ ಕುಮಾರ್ ಅವರು ನಿಸ್ಸಂಶಯವಾಗಿ ಮುಖ್ಯಮಂತ್ರಿ ಪದವಿಯ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ.
ಈ ಬಾರಿ ಬಿಜೆಪಿ 74 ಸೀಟುಗಳನ್ನು ಗೆದ್ದರೆ, ನಿತೀಶ್ ಕುಮಾರ್ ಅವರ ಜೆಡಿಯು 43 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.ಇಲ್ಲಿ ಕೈಮೇಲಾಗಿದ್ದು ಬಿಜೆಪಿಯದ್ದೇ. ಸಹಜವಾಗಿ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಪ್ರಶ್ನೆ ಉದ್ಭವವಾಗುತ್ತದೆ.
ಇದಕ್ಕೆಲ್ಲಾ ತೆರೆ ಎಳೆದಿರುವ ಬಿಹಾರದ ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಸುಶಿಲ್ ಕುಮಾರ್ ಮೋದಿ, ನಾವು ಚುನಾವಣೆಗೆ ಮುನ್ನ ಮಾಡಿಕೊಂಡ ಬದ್ಧತೆಯಂತೆ ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿಯಾಗುತ್ತಾರೆ. ಇದರಲ್ಲಿ ಯಾವುದೇ ಗೊಂದಲ್ಲ ಇಲ್ಲ ಎಂದಿದ್ದಾರೆ.
ಚುನಾವಣೆಯಲ್ಲಿ ಕೆಲವರು ಹೆಚ್ಚು ಸ್ಥಾನಗಳನ್ನು ಗೆಲ್ಲುವುದು, ಕೆಲವರು ಕಡಿಮೆ ಸ್ಥಾನಗಳು ಗೆಲ್ಲುವುದು ಇದ್ದಿದ್ದೆ, ಆದರೆ ನಾವು ಮತ್ತು ಜೆಡಿಯು ಸಮಾನ ಸಹಭಾಗಿಗಳು ಎಂದು ಸುಶಿಲ್ ಕುಮಾರ್ ಮೋದಿ ಹೇಳಿದ್ದಾರೆ,
ಬಿಹಾರದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರ ನಡೆಸಲಿಲ್ಲ. ನಿತೀಶ್ ಕುಮಾರ್ ಇಲ್ಲದೆ ಅಧಿಕಾರ ಸಾಧ್ಯವೂ ಇಲ್ಲ, ಆದರೆ ಈ ಬಾರಿ ಫಲಿತಾಂಶದಲ್ಲಿ ಬಿಜೆಪಿ ಕೈ ಮೇಲಾಗಿದೆ. ಈ ಬಾರಿ ನಿತೀಶ್ ಕುಮಾರ್ ಸರ್ಕಾರದ ಸಂಪುಟದಲ್ಲಿ ಅಧಿಕಾರ ಹಂಚಿಕೆಯಲ್ಲಿ ಬದಲಾವಣೆ ಕಾಣಬಹುದು.
ಹಿಂದೆ ಎನ್ ಡಿಎ ಮೈತ್ರಿಯಾಗಿದ್ದ ಚಿರಾಗ್ ಪಾಸ್ವಾನ್ ರ ಎಲ್ ಜೆಪಿ ಹೊರಬಂದಿದ್ದು ನಿತೀಶ್ ಕುಮಾರ್ ಗೆ ದೊಡ್ಡ ಹೊಡೆತ ನೀಡಿದೆ. ಅದು ಒಂದು ಸ್ಥಾನ ಗಳಿಸಿರಬಹುದು, ಆದರೆ ಅನೇಕ ಕ್ಷೇತ್ರಗಳಲ್ಲಿ ಜೆಡಿಯುನ ಮತ ವಿಭಜಿಸಿದೆ, ಇದರಿಂದಾಗಿ 2015ಕ್ಕಿಂತ ಈ ಬಾರಿ ಜೆಡಿಯುಗೆ ಕಡಿಮೆ ಮತ ಬಂದಿದೆ.2015ರಲ್ಲಿ ಜೆಡಿಯು 71 ಸ್ಥಾನಗಳನ್ನು ಗಳಿಸಿತ್ತು.
ಚಿರಾಗ್ ಪಾಸ್ವಾನ್ ಅವರು ಜೆಡಿಯು, ನಿತೀಶ್ ಕುಮಾರ್ ವಿರುದ್ಧ ಸಿಡಿದೆದ್ದಿದ್ದು ಬಿಜೆಪಿಗೆ ವರವಾಗಲಿದೆ ಎಂದೇ ಬಹುತೇಕ ಮಂದಿ ಮಾತನಾಡಿಕೊಳ್ಳುತ್ತಿದ್ದರು.
ನಿತೀಶ್ ಕುಮಾರ್ ರಾಜಕೀಯ: ಸತತ ಮೂರು ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವ ನಿತೀಶ್ ಕುಮಾರ್ ಅವರಿಗೆ ಶತ್ರುಗಳಲ್ಲಿ ಸ್ನೇಹಿತರನ್ನು ಮಾಡಿಕೊಳ್ಳುವ ಮತ್ತು ಸ್ನೇಹಿತರಲ್ಲಿ ಶತ್ರುಗಳನ್ನು ಹುಡುಕುವ ಅಸಾಧಾರಣ ಸಾಮರ್ಥ್ಯವಿದೆ.
ಬಿಜೆಪಿಗೂ ನಿತೀಶ್ ಕುಮಾರ್ ಅವರ ಪರ್ಯಾಯವಾಗಿ ನಾಯಕತ್ವವಿರುವ, ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬದಲಿ ನಾಯಕ ಸಿಕ್ಕಿಲ್ಲ ಎನ್ನಬಹುದು.
ನಿತೀಶ್ ಕುಮಾರ್ ಅವರು ಮೂಲತಃ ಒಬ್ಬ ಎಂಜಿನಿಯರಿಂಗ್ ಪದವೀಧರ. ಜೆಪಿ ಚಳವಳಿ ಸಮಯದಲ್ಲಿ ರಾಜಕಾರಣಕ್ಕೆ ಸಕ್ರಿಯವಾಗಿ ಕಾಲಿಟ್ಟರು. ರಾಜ್ಯ ಸರ್ಕಾರದ ವಿದ್ಯುತ್ ಇಲಾಖೆಯಲ್ಲಿ ಕೆಲಸದಲ್ಲಿದ್ದ ನಿತೀಶ್ ಕುಮಾರ್ ನಂತರ ವೃತ್ತಿ ತೊರೆದು ಪೂರ್ಣ ಪ್ರಮಾಣದಲ್ಲಿ ರಾಜಕೀಯಕ್ಕೆ ಬಂದರು.
ಸತತ ಮೂರು ಬಾರಿ ಚುನಾವಣೆಯಲ್ಲಿ ಸೋತ ನಂತರ ನಿತೀಶ್ ಕುಮಾರ್ ಗೆಲುವಿನ ನಗೆ ಬೀರಿದ್ದು 1985ರಲ್ಲಿ ಲೋಕದಳ ಅಭ್ಯರ್ಥಿಯಾಗಿ ಹರ್ನೌತ್ ಕ್ಷೇತ್ರದಿಂದ ಕಣಕ್ಕಿಳಿದು. 1984ರಲ್ಲಿ ಇಂದಿರಾ ಗಾಂಧಿ ಹತ್ಯೆಯ ಬಳಿಕ ಕಾಂಗ್ರೆಸ್ ಅಭೂತಪೂರ್ವ ಮತಗಳನ್ನು ಗಳಿಸಿದರೂ ಕೂಡ ನಿತೀಶ್ ಕುಮಾರ್ ಜಯಗಳಿಸಿದ್ದರು.
ನಾಲ್ಕು ವರ್ಷಗಳ ನಂತರ ಬರ್ಹ್ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಸ್ಪರ್ಧಿಸಿ ಲೋಕಸಭೆ ಪ್ರವೇಶಿಸಿದರು. ಲಾಲೂ ಪ್ರಸಾದ್ ಯಾದವ್ ಗೆ ಸಮನಾಗಿ ಬಿಹಾರದಲ್ಲಿ ರಾಜಕೀಯದಲ್ಲಿ ಬೆಳೆದರು. ನಂತರ ದಶಕದಲ್ಲಿ ಬಿಹಾರದಲ್ಲಿ ಕಂಡಿದ್ದು ಲಾಲೂ ಪ್ರಸಾದ್ ಯಾದವ್ ಮತ್ತು ಅವರ ಪತ್ನಿ ರಾಬ್ರಿ ದೇವಿ ಆಡಳಿತ, ಇವರಿಬ್ಬರ ಮೇಲೆ ಮೇವು ಹಗರಣ ಆರೋಪ ಅಂಟಿಕೊಂಡು ಲಾಲೂ ಪ್ರಸಾದ್ ಯಾದವ್ ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಯಬೇಕಾಗಿ ಬಂತು.
ಇದೇ ಸಮಯದಲ್ಲಿ ನಿತೀಶ್ ಕುಮಾರ್ ಲಾಲೂ ಪ್ರಸಾದ್ ಯಾದವ್ ಅವರ ಜೊತೆಗೆ ಸಖ್ಯ ಕಡಿದುಕೊಂಡು ಸಮತಾ ಪಕ್ಷವನ್ನು ಜಾರ್ಜ್ ಫೆರ್ನಾಂಡಿಸ್ ಜೊತೆಗೆ ಕಟ್ಟಿ ಪಕ್ಷವನ್ನು ಒಂದೊಂದೇ ಇಟ್ಟಿಗೆಗಳನ್ನು ಇಟ್ಟು ಕಟ್ಟಡ ನಿರ್ಮಿಸಿಕೊಂಡು ಬರುವ ರೀತಿಯಲ್ಲಿ ಕಟ್ಟಿದರು.
ಸಮತಾ ಪಕ್ಷ ಬಿಜೆಪಿ ಜೊತೆ ಸೇರಿಕೊಂಡು ನಿತೀಶ್ ಕುಮಾರ್ ಉತ್ತಮ ಸಂಸದರಾಗಿ ಅಂದಿನ ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲಿ ಪ್ರಬಲ ಮಂತ್ರಿಯೂ ಆದರು. ಅಂತಿನ ಜೆಡಿಯು ಅಧ್ಯಕ್ಷ ಶರದ್ ಯಾದವ್ ಮತ್ತು ಲಾಲೂ ಪ್ರಸಾದ್ ಯಾದವ್ ಜೊತೆ ಭಿನ್ನಾಭಿಪ್ರಾಯವಾಗಿ ಆರ್ ಜೆಡಿ ಸ್ಥಾಪಿಸಿ ನಿತೀಶ್ ಕುಮಾರ್ ಹೊರಬಂದರು.
2004ರಲ್ಲಿ ಕೇಂದ್ರದಲ್ಲಿ ಎನ್ ಡಿಎ ಅಧಿಕಾರ ಕಳೆದುಕೊಂಡಾಗ ಬಿಹಾರದಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಜಯ ಬಂದಿತ್ತು. ನಂತರ ನಡೆದ ರಾಜಕೀಯ ವಿದ್ಯಮಾನಗಳ ನಂತರ ನಿತೀಶ್ ಕುಮಾರ್ ಅವರನ್ನು ಬಿಹಾರದಲ್ಲಿ ಎನ್ ಡಿಎಯ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸಲಾಯಿತು.
ನಂತರ ನಿತೀಶ್ ಕುಮಾರ್ ಮೊದಲ ಬಾರಿ ಮುಖ್ಯಮಂತ್ರಿಯಾದಾಗಲೇ ಹಲವು ಸುಧಾರಣೆಗಳನ್ನು ರಾಜ್ಯದಲ್ಲಿ ತಂದರು. ಮಕ್ಕಳಿಗೆ ಉಚಿತ ಸೈಕಲ್, ಸ್ಕೂಲ್ ಯೂನಿಫಾರ್ಮ್ ನಿಂದ ಹಿಡಿದು ಅಪರಾಧ ವಿಷಯಗಳು, ಭೂ ಸುಧಾರಣೆ, ಒಬಿಸಿ, ದಲಿತರಲ್ಲಿ ಒಳಜಾತಿ ಇವೆಲ್ಲವೂ ನಿತೀಶ್ ಗೆ ವರವಾಯಿತು.
2013ರಲ್ಲಿ 17 ವರ್ಷದ ಬಿಜೆಪಿ ಸಖ್ಯವನ್ನು ತೊರೆದು ಎನ್ ಡಿಎಯಿಂದ ನಿತೀಶ್ ಕುಮಾರ್ ಹೊರಬಂದಿದ್ದೂ ಇದೆ. ಆದರೆ ಮತ್ತೆ ಬಿಜೆಪಿ ಜೊತೆ ಕೈಜೋಡಿಸಿದರು.
ನಿತೀಶ್ ಕುಮಾರ್ ಅವರನ್ನು ಮೌರ್ಯ ದೊರೆ ಚಂದ್ರಗುಪ್ತನ ಆಪ್ತ ಸಲಹೆಗಾರ ಚಾಣಕ್ಯನಿಗೆ ರಾಜಕೀಯದಲ್ಲಿ ಹೋಲಿಸುವುದುಂಟು. ಭ್ರಷ್ಟಾಚಾರದ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎನ್ನುವ ಅವರು ಅದಕ್ಕಾಗಿ ಒಂದು ಬಾರಿ ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿದಿದ್ದೂ ಇದೆ.