ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ, ಭಜನಾ ಮಂಡಳಿ ವತಿಯಿಂದ ಬಡಕುಟುಂಬಕ್ಕೆ ಮನೆ ನಿರ್ಮಾಣ ಶಿಲಾನ್ಯಾಸ
ಉಡುಪಿ: ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಹಾಗೂ ಮಲ್ಪೆಯ ಐದು ಭಜನಾ ಮಂಡಳಿ ವತಿಯಿಂದ ಬಡಕುಟುಂಬಕ್ಕೆ ಮನೆ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮ ಭಾನುವಾರ ಮಲ್ಪೆಯಲ್ಲಿ ನಡೆಯಿತು.
ಸ್ಥಳೀಯ ಶ್ರೀಜ್ಞಾನಜ್ಯೋತಿ ಭಜನಾ ಮಂದಿರ ಬೀಚ್ ಮಲ್ಪೆ, ಶ್ರೀಶಿವಪಂಚಾಕ್ಷರಿ ಭಜನಾ ಮಂದಿರ ಕೊಳ, ಶ್ರೀಬಾಲಕರ ರಾಮ ಭಜನಾ ಮಂದಿರ ಕೊಳ ಶ್ರೀ ಹನುಮಾನ್ ವಿಠೋಭ ಭಜನಾ ಮಂದಿರ ಕೊಳ ಹನುಮಾನ್ ನಗರ, ಶ್ರೀಭಕ್ತಿ ಉದಯ ಪಂಡರಿನಾಥ ಭಜನಾ ಮಂದಿರ ತೊಟ್ಟಂ ಇವರ ವತಿಯಿಂದ ಕಮಲಾ ಕೋಟ್ಯಾನ್ ಎಂಬವರ ಬಡಕುಟುಂಬವೊಂದಕ್ಕೆ 8 ಲಕ್ಷ ರೂ ವೆಚ್ಚದಲ್ಲಿ ಮನೆಗೆ ಶಿಲಾನ್ಯಾಸವನ್ನು ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನೆರವೇರಿಸಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಸ್ಥಳೀಯ ನಗರ ಸಭಾ ಸದಸ್ಯೆ ಲಕ್ಷ್ಮೀ ಮಂಜುನಾಥ್ ಉಪಸ್ಥಿತರಿದ್ದರು.
ಶ್ರೀ ಪಂಡರೀನಾಥ ಭಕ್ತಿ ಉದಯ ಭಜನಾ ಮಂದಿರದ ಅಧ್ಯಕ್ಷರಾದ ವಿಲಾಸ್ ಕುಮಾರ್, ಶ್ರೀ ಜ್ಞಾನಜ್ಯೋತಿ ಭಜನಾ ಮಂದಿರ ಅಧ್ಯಕ್ಷರಾದ ಜ್ಞಾನೇಶ್ವರ ಕೋಟ್ಯಾನ್, ಶ್ರೀ ಶಿವ ಪಂಚಾಕ್ಷರಿ ಭಜನಾ ಮಂದಿರದ ಅಧ್ಯಕ್ಷರಾದ ಅರುಣ್ ಸಾಲ್ಯಾನ್, ಬಾಲಕರ ಶ್ರೀ ರಾಮ ಭಜನಾ ಮಂದಿರ ಅಧ್ಯಕ್ಷರಾದ ಲಕ್ಷ್ಮಣ ಕರ್ಕೇರ, ಶ್ರೀ ಹನುಮಾನ್ ವಿಠೋಬ ಭಜನಾ ಮಂದಿರ ಅಧ್ಯಕ್ಷರಾದ ಸತೀಶ್ ಬಂಗೇರ ಉಪಸ್ಥಿತರಿದ್ದರು.
ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಹಾಗೂ ಐದು ಭಜನಾ ಮಂಡಳಿ ವತಿಯಿಂದ ಕಳೆದ ವರ್ಷ ಮಲ್ಪೆ ರುದ್ರಭೂಮಿಗೆ ಕಟ್ಟಿಗೆ ಒಡೆಯುವ ಯಂತ್ರ ಹಾಗೂ ಕಟ್ಟಿಗೆ ಸಂಗ್ರಹಿಸುವ ಕೊಠಡಿ ನಿರ್ಮಾಣವನ್ನು ಕಲ್ಪಿಸಿಕೊಟ್ಟಿದ್ದರು.
ಇದೇ ರೀತಿ ಪ್ರತಿ ವರ್ಷ ಸಮಾಜಮುಖಿ ಕಾರ್ಯ ಕೈಗೊಳ್ಳುವುದಾಗಿ ಸಮಿತಿ ತಿಳಿಸಿದ್ದು, ಅದರಂತೆ ಭಜನಾ ಮಂಡಳಿಯ ವ್ಯಾಪ್ತಿಯ ಬಡಕುಟುಂಬಕ್ಕೆ ಮನೆ ನಿರ್ಮಿಸಿಕೊಡುವುದಾಗಿ ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ಪಾಂಡುರಂಗ ಮಲ್ಪೆ ಅವರು ತಿಳಿಸಿದ್ದಾರೆ.