ಮಾಣಿಬೆಟ್ಟು: ಪುಷ್ಕರಣಿ ಸ್ವಚ್ಛತಾ ಕಾರ್ಯಕ್ರಮ
ಶಿರ್ವ: ಶ್ರೀನಿಕೇತನ ವಸ್ತುಸಂಗ್ರಹಾಲಯ ಮತ್ತು ಕೆಳದಿ ರಾಣಿ ಚೆನ್ನಮ್ಮಾಜಿ ಅಧ್ಯಯನ ಪೀಠ-ಕುಕ್ಕೆಸುಬ್ರಹ್ಮಣ್ಯ, ಪ್ರಾಚ್ಯಸಂಚಯ ಸಂಶೋಧನ ಕೇಂದ್ರ-ಉಡುಪಿ ಹಾಗೂ ಉಡುಪಿಗೆ ಬನ್ನಿ-ಯೂಟ್ಯೂಬ್ ಚಾನೆಲ್ ಇವರ ಜಂಟಿ ಸಹಯೋಗದಲ್ಲಿ ಪ್ರಾಚ್ಯ: ತೌಳವ ಕರ್ಣಾಟ ಎಂಬ ಶೀರ್ಷಿಕೆಯಡಿಯಲ್ಲಿ ಶಿರ್ವ ಗ್ರಾಮದ ವ್ಯಾಪ್ತಿಗೆ ಒಳಪಡುವ ಮಾಣಿಬೆಟ್ಟು ಪ್ರದೇಶದಲ್ಲಿನ ಪ್ರಾಚೀನ ಪುಷ್ಕರಣಿಯ ಸ್ವಚ್ಛತಾ ಕಾರ್ಯ ನಡೆಯಿತು. ನಡೆಸಲಾಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪುಷ್ಕರಣಿಯಿರುವ ಸ್ಥಳದ ಮಾಲೀಕರಾದ ಬಾಲಕೃಷ್ಣ ಉಪಾಧ್ಯಾಯ ಇವರ ನೇತೃತ್ವದಲ್ಲಿ ಸಮಾಜ ಸೇವಕ ಮತ್ತು ಕೊಡುಗೈದಾನಿ ವಿಶ್ವನಾಥ್ ಶೆಣೈ ಅವರು ನೆರವೇರಿಸಿದರು. ಈ ಕಾರ್ಯಕ್ರಮದ ಮುಖ್ಯ ಸಂಯೋಜಕರಾದ ಶ್ರೀನಿಕೇತನ ವಸ್ತುಸಂಗ್ರಹಾಲಯ & ಕೆಳದಿ ರಾಣಿ ಚೆನ್ನಮ್ಮಾಜಿ ಅಧ್ಯಯನ ಪೀಠ-ಕುಕ್ಕೆ ಸುಬ್ರಹ್ಮಣ್ಯ ಇದರ ಉಪ ನಿರ್ದೇಶಕರಾದ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಇವರ ಜೊತೆ ಸಹ ಸಂಯೋಜಕರಾಗಿ ಪ್ರಾಚ್ಯಸಂಚಯ ಸಂಶೋಧನ ಕೇಂದ್ರ-ಉಡುಪಿ ಇದರ ಅಧ್ಯಯನ ನಿರ್ದೇಶಕರಾದ ಪ್ರೊ. ಎಸ್.ಎ ಕೃಷ್ಣಯ್ಯ ಮತ್ತು ಉಡುಪಿಗೆ ಬನ್ನಿ-ಯೂಟ್ಯೂಬ್ ಚಾನೆಲ್ ಇದರ ಸ್ಥಾಪಕರಾದ ಡಾ. ಗಣೇಶ್ ಪ್ರಸಾದ್ ಜಿ. ನಾಯಕ್ ಉಪಸ್ಥಿತರಿದ್ದರು.
ಗತವೈಭವನ್ನು ಮುಂದಿನ ಪೀಳಿಗೆಗೆ ತಿಳಿಸಲು ಇಂತಹ ಇತಿಹಾಸ ಉಳಿಸಿ, ಸಂರಕ್ಷಿಸುವ ಕಾರ್ಯಗಳು ಇನ್ನೂ ನಡೆಯಬೇಕೆಂದು ಹಾಗೂ ನಮ್ಮಲ್ಲಿ ಇತಿಹಾಸದ ಪ್ರಜ್ಞೆ ಮೂಡಲು ಪ್ರಾಚ್ಯ: ತೌಳವ ಕರ್ಣಾಟದ ಈ ಅಭಿಯಾನಕ್ಕೆ ಎಲ್ಲರೂ ಕೈ ಜೋಡಿಸಬೇಕೆಂದು ಕ್ರೆಡಿಟ್ ಕೊ- ಆಪರೇಟಿವ್ ಬ್ಯಾಂಕ್-ಉಡುಪಿ ಇದರ ವ್ಯವಸ್ಥಾಪಕರಾದ ಉಮೇಶ್ ಆಚಾರ್ಯ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಪುಷ್ಕರಣಿ ಸಂರಕ್ಷಣೆಯ ಜೊತೆಗೆ ಪರಿಸರ ಸಂರಕ್ಷಣೆಯೂ ಆಗಬೇಕೆಂದು ಹಾಗೂ ಪ್ರಾಚ್ಯ: ತೌಳವ ಕರ್ಣಾಟ ಇದರ ಉದ್ದೇಶ ಮತ್ತು ಮುಂದಿನ ಯೋಜನೆಗಳ ಬಗ್ಗೆ ಮಾಹಿತಿಯನ್ನು ಪ್ರೊ. ಎಸ್.ಎ ಕೃಷ್ಣಯ್ಯ ಅವರು ವಿವರಿಸಿದರು.
ಮಾಣಿಬೆಟ್ಟು ಪರಿಸರದಲ್ಲಿರುವ ಈ ಪುಷ್ಕರಣಿಯು ಶಿರ್ವ ಗ್ರಾಮದಲ್ಲಿಯೇ ಪ್ರಾಚೀನವಾದುದಾಗಿದ್ದು, ಸುಮಾರು 14-15ನೆಯ ಶತಮಾನಕ್ಕೆ ಸೇರಿದೆ ಎಂದು ಅಧ್ಯಯನದಿಂದ ತಿಳಿದುಬಂದಿರುತ್ತದೆ. ಇಂತಹ ಪುಷ್ಕರಣಿಯು ಇಂದು ವಿನಾಶದಂಚಿನಲ್ಲಿದ್ದು ಈ ಪುಷ್ಕರಣಿಯ ರಕ್ಷಣಾ ಕಾರ್ಯವನ್ನು ಸ್ಥಳೀಯರ, ಇತಿಹಾಸ ಆಸಕ್ತರ, ಉತ್ಸಾಹಿ ವಿದ್ಯಾರ್ಥಿಗಳ, ಸ್ಥಳೀಯ ಸಂಘಟನೆಗಳ ಸಹಕಾರದೊಂದಿಗೆ ನೆರವೇರಿಸಲಾಯಿ ತು. ಇಲ್ಲಿಯೇ 14ನೆ ಶತಮಾನದ ಅಪರಿಪೂರ್ಣ ಶಾಸನ ಕಲ್ಲಿನ ಸಂರಕ್ಷಣೆಯನ್ನು ಸಹ ಮಾಡಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ಕು. ಶ್ರಾವ್ಯಾ ಆರ್. ನೆರವೇರಿಸಿದರು.