ಹೆಬ್ರಿ: ಮೇಘ ಸ್ಪೋಟ- ಭಾರಿ ಹಾನಿ, ನೀರಿನಲ್ಲಿ ಕೊಚ್ಚಿ ಹೋದ ಕಾರು
ಉಡುಪಿ : ಹೆಬ್ರಿ ತಾಲ್ಲೂಕಿನ ಮುದ್ರಾಡಿಯಲ್ಲಿ ಭಾನುವಾರ ಮಧ್ಯಾಹ್ನ 2:30 ರಿಂದ 3:45ರ ವರೆಗೆ ಸುರಿದ ಭಾರಿ ಮಳೆಯಿಂದಾಗಿ ಭಾರಿ ಹಾನಿಯಾಗಿದೆ. ಮುದ್ರಾಡಿಯ ಹೊಸ ಕಂಬ್ಲದಲ್ಲಿ 1, ಕಾಂತರಬೈಲಿನಲ್ಲಿ 4, ಕೆಲಕಿಲದಲ್ಲಿ 3 ಮನೆಗಳು ಅರ್ಧದಷ್ಟು ಜಲಾವೃತ್ತಗೊಂಡಿದೆ. ಮನೆಮಂದಿಯನ್ನು ಹಗ್ಗಕಟ್ಟಿ ಏಣಿಯ ಸಹಾಯದಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಒಮ್ಮಿಂದೊಮ್ಮೆಲೆ ಭಾರೀ ಮಿಂಚು ಸಿಡಿಲು ಸಹಿತ ಮಳೆಯಾಗಿದೆ. 2 ಕಾರುಗಳು ಮತ್ತು ಬೈಕ್ ಗಳು ಒಂದೇ ಸವನೆ ನುಗ್ಗಿದ ನೀರಿನಲ್ಲಿ ಕೊಚ್ಚಿ ಹೋಗಿವೆ. ಯಾವೂದೇ ಪ್ರಾಣಾಹಾನಿಯಾಗಿಲ್ಲ.
ಕಬ್ಬಿನಾಲೆಯ ಬೆಟ್ಟದಲ್ಲಿ ಮೇಘಸ್ಫೋಟದಿಂದ ಈ ರೀತಿಯಾಗಿದೆ. ಒಂದೇ ಸವನೆ ನೀರು ನುಗ್ಗಿ ಬಂದಿದೆ ಎಂದು ಮುದ್ರಾಡಿ ಗ್ರಾಮ ಪಂಚಾಯಿತಿ ಸದಸ್ಯ ಗಣಪತಿ ತಿಳಿಸಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಸಂತಿ ಪೂಜಾರಿ, ಪಂಚಾಯತಿ ಸದಸ್ಯರು, ಗ್ರಾಮ ಆಡಳಿತಾಧಿಕಾರಿ ನವೀನ್ ಕುಮಾರ್ ಕುಕ್ಕುಜೆ ಸ್ಥಳದಲ್ಲಿದ್ದಾರೆ. ಅಪಾರ ಹಾನಿ ಸಂಭವಿಸಿದೆ. ಮುದ್ರಾಡಿ ಸಂಪರ್ಕಿಸುವ ಬಲ್ಲಾಡಿ ತುಂಡುಗುಡ್ಡೆ ರಸ್ತೆ ಸಂಪೂರ್ಣ ಬಂದ್ ಆಗಿದ್ದು ಬದಲಿ ರಸ್ತೆಯ ಮೂಲಕ ಸಂಚರಿಸುತ್ತಿದ್ದಾರೆ. ಒಂದು ದನ ಹಟ್ಟಿಯೂ ಕುಸಿದು ಬಿದ್ದಿದೆ.
ಮುನಿಯಾಲು ಪಡುಕುಡೂರು ನೆಕ್ಕರ್ಬೆಟ್ಟು ಬೇಬಿ ಶೆಟ್ಟಿ ಅವರ ಮನೆಗೆ ಸಿಡಿಲು ಬಡಿದು ಮನೆಯ ಕಂಪೌಂಡ್ ಹಾನಿಯಾಗಿದೆ. ವಿದ್ಯುತ್ ವಯರುಗಳು ಸುಟ್ಟು ಹೋಗಿದೆ. ಹೆಬ್ರಿಯ ವಿವಿದೆಡೆ ಮಿಂಚು ಗುಡುತ ಸಹಿತ ಮಳೆಯಾಗಿದೆ.