ಗಂಗೊಳ್ಳಿ ಶ್ರೀಮಹಾಂಕಾಳಿ ದೇವಸ್ಥಾನದ ರೂ.20.5 ಲಕ್ಷದ ಆಭರಣ ಕಳ್ಳತನ ಪ್ರಕರಣ: ಅರ್ಚಕನ ಬಂಧನ
ಉಡುಪಿ: ಗಂಗೊಳ್ಳಿ ಖಾರ್ವಿಕೇರಿ ಶ್ರೀ ಮಹಾಂಕಾಳಿ ದೇವಸ್ಥಾನದಲ್ಲಿ ದೇವಿಯ ಮೈಮೇಲಿದ್ದ ಅಸಲಿ ಚಿನ್ನಾಭರಣಗಳ ಕಳ್ಳತನ ಮಾಡಿ, ನಕಲಿ ಚಿನ್ನಾಭರಣಗಳ ದೇವಸ್ಥಾನದಲ್ಲಿ ಇರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅರ್ಚಕನನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಆರೋಪಿಯಾದ ದೇವಸ್ಥಾನದ ಅರ್ಚಕ ಶಿರಸಿಯ ನರಸಿಂಹ ಭಟ್ (43) ಎಂಬಾತ ಬಂಧಿತ ಆರೋಪಿ. ಆರೋಪಿಯು ತನ್ನ ಸ್ವಂತಕ್ಕಾಗಿ ದೇವಸ್ಥಾನದ ಚಿನ್ನಾಭರಣಗಳನ್ನು ವಿವಿಧ ಬ್ಯಾಂಕ್ ಹಾಗೂ ಸೊಸೈಟಿಗಳಲ್ಲಿ ಅಡಮಾನವಿರಿಸಿರುವುದಾಗಿ ತನಿಖೆಯಲ್ಲಿ ಬಾಯಿಬಿಟ್ಟಿದ್ದಾನೆ.
ಪೊಲೀಸರು ವಿವಿಧ ಬ್ಯಾಂಕ್ ಹಾಗೂ ಸೊಸೈಟಿಗಳಲ್ಲಿ ಆರೋಪಿ ಆಡಮಾನ ಇರಿಸಿದ್ದ 40 ಗ್ರಾಂ ತೂಕದ ಚಿನ್ನದ ಜೋಬಿನ ಸರ (ರೂ 3,20,000), 73 ಗ್ರಾಂ ತೂಕದ ಚಿನ್ನದ ಕಾಸಿನತಾಳಿ ಸರ (ಹವಳ ಸೇರಿ) (ರೂ 5,84,000/-) 73 ಗ್ರಾಂ ತೂಕದ ಚಿನ್ನದ ಕರಿಮಣಿ ಸರ (ರೂ 5,84,000), ಚಿನ್ನದ ತಾಳಿ-3 (ರೂ 48,000), 64 ಗ್ರಾಂ ತೂಕದ ಚಿನ್ನದ ನಕ್ಲೇಸ್ ಸರ (ರೂ 5,12,000) ಒಟ್ಟು ರೂ 20,48,000 ಮೌಲ್ಯದ 256 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಈ ಪ್ರಕರಣದ ತನಿಖೆಯ ಬಗ್ಗೆ ಗಂಗೊಳ್ಳಿ ಠಾಣಾ ಪಿ.ಎಸ್.ಐ ಹರೀಶ್.ಆರ್, ಬಸವರಾಜ ಕನಶೆಟ್ಟಿ ಹಾಗೂ ಸಿಬ್ಬಂದಿಗಳಾದ ನಾಗರಾಜ, ಶಾಂತರಾಮ ಶೆಟ್ಟಿ , ರಾಘವೇಂದ್ರ, ಸಂದೀಪ ಕುರಣಿ ಹಾಗೂ ಚಾಲಕ ದಿನೇಶ ರವರನ್ನೊಳಗೊಂಡ ತಂಡ ಭಾಗವಹಿಸಿದೆ.