ಜುಲೈ 1ರಿಂದ ಶಾಲೆ ಆರಂಭ, ಜೂನ್ 5 ರಿಂದ ಕಚೇರಿ ಪ್ರಾರಂಭ
ಬೆಂಗಳೂರು: ಕೊರೊನಾ ಮಹಾ ಸ್ಫೋಟದ ಮಧ್ಯೆ, ರಾಜ್ಯದಲ್ಲಿ ಜುಲೈ 1ರಿಂದ ಹಂತ ಹಂತವಾಗಿ ಶಾಲೆಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಮೊದಲು ರಾಜ್ಯದಲ್ಲಿ ಶಾಲೆ ಪ್ರಾರಂಭ ಮಾಡುವ ಸಂಬಂಧ ಜೂನ್ 10 ರಿಂದ ಮೂರು ದಿನಗಳ ಕಾಲ ಎಲ್ಲ ಶಾಲೆಗಳಲ್ಲಿ ಪೋಷಕರ, ಎಸ್‍ಡಿಎಂಸಿ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಶಾಲೆಗಳ ಪ್ರಾರಂಭಕ್ಕೆ ಚಾಲನೆ ಕೊಟ್ಟಿರುವ ಸರ್ಕಾರ ಮೊದಲ ಹಂತವಾಗಿ ಶಾಲೆಗಳ ಕಚೇರಿ ಪ್ರಾರಂಭ ಮಾಡಲು ಅವಕಾಶ ನೀಡಿದೆ. ಜೂನ್ 5 ರಿಂದ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳ ಕಚೇರಿ ಪ್ರಾರಂಭಕ್ಕೆ ಸೂಚನೆ ನೀಡಲಾಗಿದೆ. ಜೂನ್ 8 ರಿಂದ ದಾಖಲಾತಿ ಪ್ರಕ್ರಿಯೆಗೆ ಸಿದ್ಧತೆ ಆರಂಭವಾಗಲಿದ್ದು, ಜೂನ್ 8ರಿಂದ ಖಾಸಗಿ ಶಾಲೆಗಳ ಕಚೇರಿ ಪ್ರಾರಂಭಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ನೀಡಿದೆ. ಅಲ್ಲದೇ ಜೂನ್ 15 ಒಳಗೆ ಪೋಷಕರಿಂದ ಅಭಿಪ್ರಾಯ ಸಂಗ್ರಹಿಸಿ ಇಲಾಖೆಗೆ ಮಾಹಿತಿ ಕೊಡಲು ಶಿಕ್ಷಣ ಇಲಾಖೆ ಸೂಚಿಸಿದೆ.
4-7ನೇ ತರಗತಿ – ಜುಲೈ 1
1-3ನೇ ತರಗತಿ – ಜುಲೈ 15
8-10ನೇ ತರಗತಿ – ಜುಲೈ 15
ಪ್ರೀ ಸ್ಕೂಲ್ – ಜುಲೈ 20
ಮೂರು ಮಾದರಿಯಲ್ಲಿ ಶಾಲೆಗಳ ಆರಂಭಿಸುವ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಹಿಂದಿನಂತೆ ತರಗತಿಗಳನ್ನ ನಡೆಸುವುದು. ಪಾಳಿಗಳಲ್ಲಿ ಶಾಲೆ ನಡೆಸುವುದು. ಅಂದರೆ ಬೆಳಗ್ಗೆ 8 ರಿಂದ ಮಧ್ಯಾಹ್ನ 12ರ ವರೆಗೂ ಹಾಗೂ ಮಧ್ಯಾಹ್ನ 1 ರಿಂದ ಸಂಜೆ 5 ವರೆಗೂ 2 ಪಾಳಿಯಲ್ಲಿ ಶಾಲೆ ನಡೆಸಲು ಸಲಹೆ ಪಡೆಯಲಿದೆ. ದಿನ ಬಿಟ್ಟು ದಿನ ಶಾಲೆ ನಡೆಸುವುದು. ಅಂದರೆ ಶಾಲೆಯ ಒಟ್ಟು ತರಗತಿಯನ್ನು ವಿಭಾಗ ಮಾಡಿ ದಿನ ಬಿಟ್ಟು ದಿನ ಶಾಲೆ ನಡೆಸುವುದು. ಉದಾಹರಣೆಗೆ 1-5 ನೇ ತರಗತಿ ಒಂದು ದಿನ. 6-10 ನೇ ತರಗತಿ ಮತ್ತೊಂದು ದಿನ ನಡೆಸುವ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಸೂಚಿಸಲಾಗಿದೆ.
ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಕಂಟೈನ್ಮೆಂಟ್ ಝೋನ್‍ಗಳಲ್ಲಿ ನಡೆಸಲ್ಲ. ಅಲ್ಲಿನ ಪರೀಕ್ಷಾ ಕೇಂದ್ರಗಳಲ್ಲಿ ಸ್ಥಳಾಂತರಿಸಿ, ಅಲ್ಲಿ ನಿಗದಿಯಂತೆ ಪರೀಕ್ಷೆ ನಡೆಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ಒಂದು ವೇಳೆ ಪರೀಕ್ಷೆ ಸಮಯದಲ್ಲೇ ಎಕ್ಸಾಂ ಸೆಂಟರ್ ಇರುವ ಪ್ರದೇಶ ಕಂಟೈನ್ಮೆಂಟ್ ಝೋನ್ ಆದಲ್ಲಿ, ಆ ಭಾಗದ ಮಕ್ಕಳಿಗೆ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡಲಾಗುವುದು ಎಂದು ತಿಳಿಸಿದರು. ಜೂನ್ 25ರಿಂದ ಶುರುವಾಗುವ ಪರೀಕ್ಷೆಯನ್ನು 8.48 ಲಕ್ಷ ಮಕ್ಕಳು ಬರೆಯಲಿದ್ದಾರೆ. ಕೊರೋನಾ ತಡೆ ಸಂಬಂಧ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದರು.