ಉಡುಪಿ: ನ್ಯಾಯಪೀಠ ಸಂವಿಧಾನದ ತತ್ವ ಆದರ್ಶಗಳಂತೆ ನಡೆಯಬೇಕು- ನ್ಯಾ. ಇಂದಿರೇಶ್
ಉಡುಪಿ: ಕಾನೂನು ಸಮುದ್ರದ ಮೇಲಿನ ಒಂದು ಹನಿಯಂತೆ. ಇದಕ್ಕೆ ಮಿತಿಯಿಲ್ಲ. ಉತ್ತಮ ತೀರ್ಪು ಸಮಾಜಕ್ಕೆ ಅತ್ಯಗತ್ಯ. ನ್ಯಾಯಪೀಠ ಮತ್ತು ವಕೀಲರ ಸಂಘ ಸಂವಿಧಾನದ ತತ್ವ ಆದರ್ಶಗಳಂತೆ ನಡೆಯಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಹಾಗು ಉಡುಪಿ ಜಿಲ್ಲಾ ನೂತನ ಆಡಳಿತಾತ್ಮಕ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಹೇಳಿದ್ದಾರೆ.
ಉಡುಪಿ ವಕೀಲರ ಸಂಘಕ್ಕೆ ಶನಿವಾರ ಭೇಟಿ ನೀಡಿದ ಅವರು ವಕೀಲರನ್ನು ಉದ್ದೇಶಿಸಿ ಮಾತನಾಡುತಿದ್ದರು. ಯಾವುದೇ ಕ್ಷೇತ್ರದಲ್ಲಿಯೂ ಪರಿಪೂರ್ಣ ಪಕ್ವತೆ ಯಾರಿಗೂ ಇರುವುದಿಲ್ಲ. ಅನುಭವವೇ ವೃತ್ತಿ ಹಾಗು ವೈಯಕ್ತಿಕ ಜೀವನ ಎರಡ ರಲ್ಲಿಯೂ ಮನುಷ್ಯನನ್ನು ಮುನ್ನಡೆಸುತ್ತದೆ. ನಮಗೆ ತಿಳಿಯದಿರುವ ವಿಷಯದ ಕುರಿತಾಗಿ ಇನ್ನೊಬ್ಬರನ್ನು ಕೇಳುವುದು ತಪ್ಪಲ್ಲ. ತಪ್ಪು ಮಾಡುವ ಬದಲು ಹಿರಿಯರನ್ನು ಕೇಳುವುದು ಉತ್ತಮ ಎಂದರು.
ಈ ಸಂದರ್ಭ ನ್ಯಾಯಮೂರ್ತಿ ಅವರನ್ನು ಉಡುಪಿ ವಕೀಲರ ಸಂಘದಿಂದ ಅವರನ್ನು ಸಮ್ಮಾನಿಸಲಾಯಿ ತು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್.ಎಸ್. ಗಂಗಣ್ಣನವರ್ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ, ಪೋಕ್ಸೊ ನ್ಯಾಯಾಲಯ ಶ್ರೀನಿವಾಸ್ ಸುವರ್ಣ, ಪ್ರಧಾನ ನ್ಯಾಯಾಧೀಶ ಎ.ಸಮೀವುಲ್ಲಾ ಉಪಸ್ಥಿತರಿದ್ದರು.
ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಉಪಾಧ್ಯಕ್ಷ ಮಿತ್ರ ಕುಮಾರ್ ಶೆಟ್ಟಿ ನ್ಯಾಯ ಮೂರ್ತಿಯವರ ಕಿರು ಪರಿಚಯ ಮಾಡಿದರು. ಕಾರ್ಯದರ್ಶಿ ರಾಜೇಶ್ ಎ.ಆರ್.ವಂದಿಸಿದರು. ಲೋಕಾಯುಕ್ತ ವಿಶೇಷ ಅಭಿಯೋಜಕ ಟಿ.ವಿಜಯ್ ಕುಮಾರ್ ಶೆಟ್ಟಿ ನಿರೂಪಿಸಿದರು.