ಬೈಂದೂರು: ಉಪ್ಪುಂದ ಗ್ರಾಮದಲ್ಲಿ ಅತಿಸಾರ- ಆರೋಗ್ಯ ಇಲಾಖೆಯಿಂದ ತ್ವರಿತ ಕಾರ್ಯಾಚರಣೆ
ಬೈಂದೂರು, ಅ.4: ತಾಲೂಕಿನ ಉಪ್ಪುಂದ ಗ್ರಾಪಂ ವ್ಯಾಪ್ತಿಯ ಮಡಿಕಲ್ ಮತ್ತು ಕರ್ಕಿಕಳಿ ಭಾಗದಲ್ಲಿ ಕಳೆದೊಂದು ವಾರದಿಂದ ವಾಂತಿ, ಹೊಟ್ಟೆನೋವು, ಭೇದಿ ರೋಗ ಕಾಣಿಸಿಕೊಂಡು ನೂರಕ್ಕೂ ಅಧಿಕ ಜನರು ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖಾ ತ್ವರಿತ ಕಾರ್ಯಾಚರಣೆ ನಡೆಸುವ ಮೂಲಕ ರೋಗವನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಜಿಲ್ಲೆಯಲ್ಲಿ ಕಾಲರಾ ಕಾಣಿಸಿಕೊಂಡು ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಸೋಮವಾರವೇ ಡಿಎಚ್‌ಓ ಡಾ.ಐ.ಪಿ.ಗಡಾದ್ ಸೇರಿದಂತೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ತಹಶೀಲ್ದಾರ್ ಪ್ರದೀಪ್ ಉಪ್ಪುಂದ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮನೆ ಮನೆಗೆ ಭೇಟಿ ನೀಡಿದ್ದು, ಅತಿಸಾರ ದಿಂದ ಬಳಲುತ್ತಿರುವವರಿಗೆ ಚಿಕಿತ್ಸೆಗೆ ವ್ಯವಸ್ಥೆ ಮಾಡಿದರು.
ಮಡಿಕಲ್ ಹಾಗೂ ಕರ್ಕಿಕಳಿ ಪರಿಸರದ ಎರಡು ವಾರ್ಡುಗಳ 375 ಮನೆಗಳಿಗೂ ಭೇಟಿ ನೀಡಿದ ತಂಡ ಮಾಹಿತಿಗಳನ್ನು ಕಲೆ ಹಾಕಿದೆ. ಒಟ್ಟು 140 ಮಂದಿಯಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗಿದ್ದು ಎಲ್ಲರೂ ಚೇತರಿಸಿಕೊಂಡಿದ್ದಾರೆ ಎಂದು ಡಿಎಚ್‌ಓ ಅವರು ತಿಳಿಸಿದರು. ಹೆಚ್ಚಿನವರಲ್ಲಿ ವಿಪರೀತ ಹೊಟ್ಟೆನೋವು, ಜ್ವರ, ಮೈಕೈ ನೋವು, ಭೇದಿಯಲ್ಲಿ ರಕ್ತ ಕಂಡುಬಂದಿದ್ದು ಚಿಕಿತ್ಸೆಯ ಬಳಿಕ ಗುಣಮುಖರಾಗಿದ್ದಾರೆ ಎಂದರು.
ಒಟ್ಟು 8 ಮಂದಿಯ ಮಲದ ಸ್ಯಾಂಪಲ್‌ಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಪಡೆದಿದ್ದು, ಇವರಲ್ಲಿ ಇಬ್ಬರಲ್ಲಿ ಮಾತ್ರ ಆಮಶಂಕೆ ಪತ್ತೆಯಾಗಿದೆ. ಇವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು, ಸಂಪೂರ್ಣ ಗುಣಮುಖರಾಗಿದ್ದಾರೆ. ಯಾರೂ ಗಾಬರಿಗೊಳ್ಳ ಬೇಕಾದ ಅಗತ್ಯವಿಲ್ಲ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ ತಿಳಿಸಿದರು.
ಕಲುಷಿತ ಕುಡಿಯುವ ನೀರಿನಿಂದ ರೋಗ ಬಂದಿರಬೇಕೆಂಬ ಅನುಮಾನ ವಿದ್ದು, ಈಗ ಉಪ್ಪುಂದ ಗ್ರಾಮದ ಎಲ್ಲಾ ಜಲಮೂಲಗಳನ್ನು ಕ್ಲೋರಿನೇಷನ್ ಮಾಡಲಾಗಿದೆ. ದೈಹಿಕ ಸ್ವಚ್ಛತೆಯ ಬಗ್ಗೆ ನಿರ್ಲಕ್ಷ, ನೀರನ್ನು ಕಾಯಿಸದೇ ಕುಡಿಯು ವುದು, ತಿನ್ನುವ ಆಹಾರ ಪದಾರ್ಥಗಳ ಸ್ವಚ್ಛತೆ ಕುರಿತು ಅಸಡ್ಡೆಯಿಂದ ಲೂ ರೋಗ ಬಂದಿರುವ ಸಾಧ್ಯತೆ ಇದೆ ಎಂದು ಡಾ.ಗಡಾದ್ ಹೇಳಿದರು.
ಗ್ರಾಮ ಪಂಚಾಯಿತಿಯಿಂದ ಸರಬರಾಜಾಗುತ್ತಿರುವ ಕಲುಷಿತ ಕುಡಿಯುವ ನೀರಿನಿಂದ ಈ ರೋಗ ಕಾಣಿಸಿಕೊಂಡಿದೆ ಎಂದು ಜನರು ಅನುಮಾನ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಆ ನೀರಿನ ಸ್ಯಾಂಪಲ್‌ನ್ನು ಪರೀಕ್ಷೆಗೆ ಕಳುಹಿಸಿದ್ದು, ಅದರ ವರದಿ ಆಧರಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖಾಧಿಕಾರಿಗಳು ಜನರಿಗೆ ಭರವಸೆ ನೀಡಿದರು.
ಈ ಸಂದರ್ಭ ಉಪ್ಪುಂದ ಗ್ರಾ.ಪಂ. ಅಧ್ಯಕ್ಷ ಮೋಹನಚಂದ್ರ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭಾರತಿ, ತಾಲೂಕು ವೈದ್ಯಾಧಿಕಾರಿ ಡಾ. ರಾಜೇಶ್, ಬೈಂದೂರು ಠಾಣಾಧಿಕಾರಿ ತಿಮ್ಮೇಶ್, ಉಪ್ಪುಂದ ಗ್ರಾ.ಪಂ. ಪಿಡಿಓ ಸುದರ್ಶನ ಎಸ್., ಕಾರ್ಯದರ್ಶಿ ಗಿರಿಜಾ, ಕರಾವಳಿ ಕಾವಲುಪಡೆಯ ಸಿಬ್ಬಂದಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
5-6 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಯಾವುದೇ ಗಂಭೀರ ಸಮಸ್ಯೆ ಇಲ್ಲ, ಹೆಚ್ಚು ಜನರು ಗುಣಮುಖರಾ ಗಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.”