ದೆಹಲಿಯಲ್ಲಿ ಬೀಡುಬಿಟ್ಟ ಸತೀಶ್ ಜಾರಕಿಹೊಳಿ: ಸಿಎಂ ರಾಜೀನಾಮೆ ಬಗ್ಗೆ ಹೆಚ್ಚಿದ ವದಂತಿ, ಸಿದ್ದು ಪಾಳಯದಲ್ಲಿ ಬಿರುಸಿನ ಚರ್ಚೆ…?
ಬೆಂಗಳೂರು: ಸಿದ್ದರಾಮಯ್ಯ ಅವರ ಪತ್ನಿ ಮುಡಾ ಸೈಟ್ ಗಳನ್ನು ವಾಪಸ್ಸು ನೀಡಿದ ಬಳಿಕ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವಂತೆ ಬಿಜೆಪಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮುಂದುವರಿದಿದ್ದು, ಇದರ ಬೆನ್ನಲ್ಲೇ ಮುಂದಿನ ಸಿಎಂ ಯಾರನ್ನು ಮಾಡುವುದು ಎಂಬ ಕುರಿತು ಕಾಂಗ್ರೆಸ್ ಪಾಳಯದಲ್ಲಿ ಚರ್ಚೆಗಳು ಬಿರುಸುಗೊಂಡಿದೆ
ಈ ನಡುವೆ ಸತೀಶ್ ಜಾರಕಿಹೊಳಿಯವರು ದೆಹಲಿಗೆ ಭೇಟಿ ನೀಡಿದ್ದು, ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಬೆಳವಣಿಗೆ ಸಿದ್ದರಾಮಯ್ಯ ರಾಜೀನಾಮೆ ನೀಡುವ ಕುರಿತು ಊಹಾಪೋಹಗಳು ಹೆಚ್ಚಾಗುವಂತೆ ಮಾಡಿದೆ.
ದೆಹಲಿ ಭೇಟಿಗೂ ಮುನ್ನ ರಮೇಶ್ ಜಾರಕಿಹೊಳಿಯ ವರು ತಮ್ಮ ಸಂಪುಟ ಸಹೋದ್ಯೋಗಿಗಳಾದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ಭೇಟಿಯಾಗಿದ್ದು. ಇಬ್ಬರು ನಾಯಕರ ಭೇಟಿ ಬಳಿಕ ದೆಹಲಿಗೆ ಹಾರಿರುವುದು ಮತ್ತಷ್ಟು ಅನುಮಾನಗಳು ಹೆಚ್ಚಾಗುವಂತೆ ಮಾಡಿದೆ.
ಮೂವರೂ ಸಿದ್ದರಾಮಯ್ಯ ಆಪ್ತರೇ ಆಗಿದ್ದು, ಮುಂದಿನ ಸಿಎಂ ಹುದ್ದೆಗೆ ಮೂವರ ಪೈಕಿ ಓರ್ವ ನಾಯಕರ ಹೆಸರನ್ನು ಸಿದ್ದರಾಮಯ್ಯ ಅವರು ಸೂಚಿಸಿರುವ ಸಾಧ್ಯತೆಗಳಿವೆ. ಹೀಗಾಗಿಯೇ ಎಐಸಿಸಿ ಮಲ್ಲಿಕಾರ್ಜುನ ಖರ್ಗೆಯವರು ನಾಯಕತ್ವ ಬದಲಾವಣೆ ಕುರಿತು ಇತ್ತೀಚೆಗೆ ಹೇಳಿಕೆ ನೀಡಿದ್ದರು ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ಈ ನಡುವೆ ನವದೆಹಲಿಗೆ ತೆರಳುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸತೀಶ್ ಜಾರಕಿಹೊಳಿಯವರು, ಮೊದಲ ಬಾರಿಗೆ ಸಂಸದರಾಗಿರುವ ತಮ್ಮ ಪುತ್ರಿ ಪ್ರಿಯಾಂಕಾ ಅವರಿಗೆ ಮಾರ್ಗದರ್ಶನ ನೀಡುವ ಸಲುವಾಗಿ ದೆಹಲಿಗೆ ಆಗಾಗ್ಗೆ ಭೇಟಿ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಅಲ್ಲದೆ, ಪ್ರಸ್ತುತ ಹರಿಯಾಣದಲ್ಲಿ ಚುನಾವಣಾ ಪ್ರಚಾರದಲ್ಲಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ನವದೆಹಲಿಗೆ ಬಂದರೆ ನನ್ನನ್ನು ಭೇಟಿ ಮಾಡಲಿದ್ದಾರೆಂದೂ ತಿಳಿಸಿದ್ದಾರೆ.
ಇದೇ ವೇಳೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಮತ್ತು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಭೇಟ ಕುರಿತು ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ ಅವರು, ಭೇಟಿ ವೇಳೆ ಸಿಎಂ ಬದಲಾವಣೆ ಕುರಿತು ಯಾವುದೇ ಚರ್ಚೆಗಳೂ ನಡೆದಿಲ್ಲ ಎಂದರು.
ಯಾವುದೇ ಸಂದೇಶ ರವಾನಿಸಲು ನಾವು ಭೇಟಿಯಾಗಿರಲಿಲ್ಲ. ರಾಜಕೀಯದ ಬಗ್ಗೆ ಚರ್ಚಿಸಿದ್ದೇವೆ, ಏಕೆಂದರೆ ನಾವು ಸಿದ್ದರಾಮಯ್ಯ ಅವರನ್ನು ಬಲವಾಗಿ ಬೆಂಬಲಿಸಬೇಕಿದೆ. ಇದನ್ನು ಹೊರತುಪಡಿಸಿ ಬೇರೆ ಯಾವುದನ್ನೂ ಚರ್ಚಿಸಿಲ್ಲ ಎಂದ ಹೇಳಿದರು.
ಸಿಎಂ ಸ್ಥಾನಕ್ಕೆ ಪರ್ಯಾಯ ನಾಯಕನ ಹೆಸರನ್ನು ಹೆಸರಿಸುವ ಬಗ್ಗೆ ಮಾತುಕತೆ ನಡೆಸಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಆ ಪರಿಸ್ಥಿತಿ ಬಂದಾಗ ಚರ್ಚೆ ನಡೆಸುತ್ತೇವೆಂದು ಹೇಳಿದರು.
ಏತನ್ಮಧ್ಯೆ ಗುರುವಾರ ತುಮಕೂರಿನಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಇದು ಅಧಿಕೃತ ಭೇಟಿಯಾಗಿರಲಿಲ್ಲ. ಮಹದೇವಪ್ಪ ಅವರ ಮನೆಗೆ ಹೋಗಿದ್ದೆ, ಅಲ್ಲಿ ಸತೀಶ್ ಕೂಡ ನಮ್ಮೊಂದಿಗೆ ಸೇರಿದರು. ವಿದ್ಯುತ್ ನಿಗಮ ಸೇರಿ ನಾನಾ ವಿಷಯಗಳ ಕುರಿತು ಸಿಎಂ ಜತೆ ಚರ್ಚೆ ಮಾಡಬೇಕಿತ್ತು. ಒಟ್ಟಿಗೆ ಸಿಎಂ ಬಳಿ ಹೋಗಿದ್ದೆವು, ನಮ್ಮ ಸಭೆಗೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಹೇಳಿದರು.
10 ಸಚಿವರು ಒಬ್ಬರನ್ನೊಬ್ಬರು ಭೇಟಿ ಮಾಡಿದ್ದರೆ ಅದನ್ನು ಹಾಗೆಯೇ ಪರಿಗಣಿಸಬಹುದಿತ್ತು. ಸಚಿವರು ಮತ್ತು ಎಲ್ಲಾ 136 ಶಾಸಕರು ಸಿದ್ದರಾಮಯ್ಯ ಅವರ ಜೊತೆಗಿದ್ದೇವೆ. ನಾವು ಯಾರೂ ಸಿದ್ದರಾಮಯ್ಯ ವಿರುದ್ಧವಿಲ್ಲ ಎಂದು ಹೇಳಿದರು. ಇದೇ ವೇಳೆ ಕಾಂಗ್ರೆಸ್ ಈಗಲೂ ಸಿದ್ದರಾಮಯ್ಯ ಅವರನ್ನು ಪಕ್ಷಾಂತರಿ ನಾಯಕ ಎಂದೇ ಪರಿಗಣಿಸುತ್ತಿದೆ ಎಂಬ ಪ್ರತಿಪಕ್ಷಗಳ ಹೇಳಿಕೆ ಕುರಿತು ಪ್ರತಿಕ್ರಿಯಿ, ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು ಯಾವಾಗ? 2ನೇ ಬಾರಿ ಸಿಎಂ ಆದಾಗ ಹೊರಗಿನವರು ಎಂಬ ಪ್ರಶ್ನೆ ಎಲ್ಲಿ ಬರುತ್ತದೆ ಎಂದು ಪ್ರಶ್ನಿಸಿದರು.