ಗೋಬಿ, ಕಬಾಬ್‌ ಮತ್ತು ಪಾನಿಪುರಿ ಸಾಸ್‌ ಬಳಿಕ ಬ್ಲ್ಯಾಕ್ ಫಾರೆಸ್ಟ್ ಸೇರಿ 12 ಕೇಕ್ ಮಾದರಿಗಳಲ್ಲಿ ಕ್ಯಾನ್ಸರ್‌ಕಾರಕ ಅಂಶ ಪತ್ತೆ!

ಬೆಂಗಳೂರು: ಕೇಕ್ ಪ್ರಿಯರಿಗೆ ಆಹಾರ ಇಲಾಖೆ ಶಾಕಿಂಗ್ ಸುದ್ದಿ ನೀಡಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಕರ್ನಾಟಕದಾದ್ಯಂತ 235 ಕೇಕ್ ಮಾದರಿಗಳ ಪರೀಕ್ಷೆ ನಡೆಸಿದ್ದು, ಅವುಗಳಲ್ಲಿ 12 ಕೇಕ್ ಮಾದರಿಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಕಂಡುಬಂದಿವೆ.

ರೆಡ್ ವೆಲ್ವೆಟ್ ಮತ್ತು ಬ್ಲ್ಯಾಕ್ ಫಾರೆಸ್ಟ್ ನಂತಹ ಜನಪ್ರಿಯ ಕೇಕ್ ಸೇರಿದಂತೆ 12 ಕೇಕ್ ಮಾದರಿಗಳಲ್ಲಿ ಕ್ಯಾನ್ಸರ್-ಉಂಟುಮಾಡುವ ಅಂಶಗಳು ಪತ್ತೆಯಾಗಿವೆ ಎಂದು FSSAI ಹೇಳಿದೆ.

ಆಹಾರ ಸುರಕ್ಷತಾ ಆಯುಕ್ತ ಶ್ರೀನಿವಾಸ್ ಕೆ ಅವರು ಈ ಸಂಬಂಧ ಬೇಕರಿಗಳಿಗೆ ಎಚ್ಚರಿಕೆ ನೀಡಿದ್ದು, ಕೇಕ್‌ಗಳಲ್ಲಿ ಹಾನಿಕಾರಕ ರಾಸಾಯನಿಕಗಳು ಮತ್ತು ಬಣ್ಣಗಳನ್ನು ಬಳಸದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದ್ದಾರೆ.

ಕೇಕ್​​ಗೆ ಬಳಸುವ ಪದಾರ್ಥಗಳು ಕಲಬರಿಕೆಯಿಂದ ಕೂಡಿವೆ ಎಂಬ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತದ ಬೇಕರಿಗಳಿಂದ 235 ಮಾದರಿಗಳ ನ್ನು ಪರೀಕ್ಷೆಗೆ ಒಳಪಡಿಸಿದಾಗ 12 ಮಾದರಿಗಳಲ್ಲಿ ಅಲೂನಾ ರೆಡ್, ಸನ್ ಸೆಟ್ ಯೆಲ್ಲೋ, ಪೊನುಸೆಯಾ 4R , ಕಾರ್ಮಿಯೋಸೆನ್ ಎಂಬ ಅಂಶ ಪತ್ತೆಯಾಗಿದೆ ಎಂದು ಆಯುಕ್ತರು ಹೇಳಿದ್ದಾರೆ.

ಗೋಬಿ ಮಂಚೂರಿಯನ್, ಕಬಾಬ್‌ಗಳು ಮತ್ತು ಪಾನಿ ಪುರಿ ಸಾಸ್‌ಗಳಂತಹ ಖಾದ್ಯಗಳಲ್ಲಿ ಕೃತಕ ಬಣ್ಣಗಳನ್ನು ಆಹಾರ ಸುರಕ್ಷತಾ ಇಲಾಖೆ ನಿಷೇಧಿಸಿದ ನಂತರ ಈ ಎಚ್ಚರಿಕೆ ನೀಡಿದೆ.

ಕೇಕ್ ತಯಾರಿಸಲು ಕೃತಕ ಬಣ್ಣವನ್ನು ಅಗತ್ಯಗಿಂತ ಹೆತ್ತು ಬಳಸಲಾಗುತ್ತಿದ್ದು, ಈ ಕೃತಕ ಬಣ್ಣಗಳಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.

ಹೀಗಾಗಿ ರೆಡ್ ವೆಲ್ವೆಟ್ ಹಾಗೂ ಬ್ಲಾಕ್ ಫಾರೆಸ್ಟ್ ಕೇಕ್​ಗೆ ಬಣ್ಣ ಬಳಕೆಗೆ ನಿರ್ಬಂಧಿಸಲಾಗಿದೆ. ಆಹಾರ ಸುರಕ್ಷತಾ ಇಲಾಖೆಯ ಸೂಚನೆ ಪಾಲಿಸುವಂತೆ ಕೇಕ್ ತಯಾರಿಕರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!