ವಿಪಕ್ಷ ನಾಯಕ ಆರ್. ಅಶೋಕ್ ಭೂ ವಂಚನೆ ಹಗರಣ ಬಿಚ್ಚಿಟ್ಟ: ಕಾಂಗ್ರೆಸ್ ನಾಯಕರು

ಬೆಂಗಳೂರು: ವಿಪಕ್ಷ ನಾಯಕ ಆರ್‌. ಅಶೋಕ್‌ ವಿರುದ್ಧ ಕಾಂಗ್ರೆಸ್ ಸಚಿವರು ನೂರಾರು ಕೋಟಿ ಭೂಹಗರಣದ ಮಾಹಿತಿ ಹೊರಹಾಕಿದ್ದಾರೆ. ಅಶೋಕ್ ವಿರುದ್ಧದ ನೂರಾರು ಕೋಟಿ ರೂ. ಬೆಲೆಬಾಳುವ ಜಮೀನಿನ ಹಗರಣವನ್ನು ದಾಖಲೆ ಸಮೇತ ​​ ಸಚಿವರು ಬಿಡುಗಡೆ ಮಾಡಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಗೃಹ ಸಚಿವ ಡಾ. ಜಿ ಪರಮೇಶ್ವರ್ ಹಾಗೂ ಕಾನೂನು ಸಚಿವ ಸಚಿವ ಹೆಚ್ ​ಕೆ ಪಾಟೀಲ್ ಅವರು ದಾಖಲೆ ಬಿಡುಗಡೆ ಮಾಡಿ, ಅಶೋಕ್‌ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಪರಿಹಾರವಾಗಿ ಬಂದಿದ್ದ 14 ನಿವೇಶನಗಳನ್ನು ವಾಪಸ್ ನೀಡಲಾಗಿದೆ. ಈ ಬಗ್ಗೆ ಆರ್‌ ಅಶೋಕ್‌ ಬೇರೆ ಅರ್ಥ ಕಲ್ಪಿಸಿ, ತಪ್ಪು ಮಾಡಿರುವ ಕಾರಣ ವಾಪಸ್ ನೀಡಿದ್ದೀರಿ ಎಂದು ಆರೋಪ ಮಾಡಿದ್ದಾರೆ. ಆರ್‌ ಅಶೋಕ್‌ ಅವರು ಲೊಟ್ಟೆ ಗೊಲ್ಲಹಳ್ಳಿಯಲ್ಲಿ ನೂರಾರು ಕೋಟಿ ಭೂ ಹಗರಣ ಮಾಡಿದ್ದು ನೆನಪಿಲ್ಲವೇ ಎಂದು ಗೃಹ ಸಚಿವ ಪರಮೇಶ್ವರ್‌ ಪ್ರಶ್ನಿಸಿದರು.

ಕಳೆದ ಕೆಲ ದಿನಗಳಿಂದ ಮುಡಾ ಬಗ್ಗೆ ಚರ್ಚೆಯಾಗ್ತಿದೆ. ಮುಖ್ಯಮಂತ್ರಿಗಳ ಪತ್ನಿ ಮುಡಾಗೆ ನಿವೇಶನಗಳನ್ನ ವಾಪಸ್ ಮಾಡಿದ್ದಾರೆ. ಆದರೂ ಬಿಜೆಪಿಯ ಮುಖಂಡರು ವಾಪಸ್ ಕೊಟ್ಟಿರೋದೆ ಸರಿಯಿಲ್ಲ. ತಪ್ಪನ್ನ ಒಪ್ಪಿಕೊಂಡಂತಾಯ್ತು ಅಂತಾ ಬೇರೆ ಬೇರೆ ಅರ್ಥದಲ್ಲಿ ಮಾತಾಡ್ತಿದ್ದಾರೆ. ಆದ್ರೆ ವಿಪಕ್ಷ ನಾಯಕ ಆರ್‌. ಅಶೋಕ್‌ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಕೊಂಡು ಮಾಡಿರೋದೆ ತಪ್ಪು. ಸರ್ಕಾರದ ಜಾಗ ಕಬಳಿಸಿ ಒಪ್ಪಿಕೊಂಡಾಯ್ತು ಅಂತಾ ಅವರದೇ ಭಾಷೆಯಲ್ಲಿ ಮಾತಾಡಿದ್ದಾರೆ. ಅವರ ಅವಧಿಯಲ್ಲಾದ ಹಗರಣದ ಬಗ್ಗೆ ರಾಜ್ಯದ ಜನರ ಮುಂದಿಡೋಕೆ ಬಂದಿದ್ದೀವಿ ಎಂದು ಹೇಳಿದರು.

ಲೊಟ್ಟೆಗೊಲ್ಲಹಳ್ಳಿಯಲ್ಲಿ 32 ಗುಂಟಾ ಭೂಮಿಗೆ ಬಿಡಿಎ ನೋಟಿಫಿಕೇಷನ್ ಮಾಡಿದ್ದು, 1978ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, 2003 ಮತ್ತು 2007ರಲ್ಲಿ ಬಿಡಿಎ ವಶದಲ್ಲಿದ್ದ ಜಮೀನನ್ನು ಅಶೋಕ ಅವರು ಹಿಂದಿನ ಮಾಲೀಕರ ಕುಟುಂಬದ ಸದಸ್ಯರಿಂದ ಸಂಪೂರ್ಣ ಖರೀದಿಸಿದ್ದರು ಎಂದು ಡಾ.ಪರಮೇಶ್ವರ ಹೇಳಿದರು. 2009ರಲ್ಲಿ ರಾಮಸ್ವಾಮಿ ಎಂಬುವವರ ಅರ್ಜಿಯ ಆಧಾರದ ಮೇಲೆ ಅಂದಿನ ಸಿಎಂ ಬಿಎಸ್ ಯಡಿಯೂರಪ್ಪ ಡಿನೋಟಿಫೈ ಮಾಡಿದ್ದರು ಎಂದು ಗೃಹ ಸಚಿವರು ತಿಳಿಸಿದ್ದಾರೆ.

“ಡಿನೋಟಿಫಿಕೇಷನ್ ನಂತರ ನಿವೃತ್ತ ವಿಂಗ್ ಕಮಾಂಡರ್ ಜಿ.ವಿ ಅತ್ರಿ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡುತ್ತಾರೆ. ನಂತರ ಇದು ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ನಂತರ ಆರ್. ಅಶೋಕ್ ಅವರು ಈ ಜಮೀನು ಹಿಂತಿರುಗಿಸಲು ತೀರ್ಮಾನಿಸುತ್ತಾರೆ. 27-08-2011ರಂದು ರಿಜಿಸ್ಟರ್ ಗಿಫ್ಟ್ ಮೂಲಕ ಬಿಡಿಎಗೆ ನೀಡುತ್ತಾರೆ. ಓನರ್‌ಶಿಪ್‌ ಇಲ್ಲದೇ ಅಶೋಕ್ ಗಿಫ್ಟ್ ಬಿಡಿಎಗೆ ನೀಡಿದ್ದಾರೆ ಎಂದು ಹಳೆಯ ಪ್ರಕರಣವೊಂದನ್ನ ಬಯಲು ಮಾಡಿದ್ದಾರೆ. ಆ ನಂತರ ಅತ್ರಿಯವರು ಹೈಕೋರ್ಟ್ ಅರ್ಜಿ ಹಾಕ್ತಾರೆ, ಕ್ರಿಮಿನಲ್ ಕೇಸ್ ಹಾಕುವ ಅವಶ್ಯಕತೆಯಿಲ್ಲ ಎಂದು ಹೈಕೋರ್ಟ್‌ನಿಂದ ತೀರ್ಪು ಬರುತ್ತೆ. ವಾಪಸ್ ಕೊಟ್ಟಿಬಿಟ್ಟರಲ್ಲ ಕೇಸ್ ಬೇಕಾಗಿಲ್ಲ ಅಂತಾ ಜಡ್ಜ್ ಮೆಂಟ್ ಬರುತ್ತೆ. ಈಗ ಸಿಎಂ ಪತ್ನಿ ಸೈಟು ವಾಪಸ್‌ ಮಾಡಿದಾಗ ಮಾತನಾಡುವವರು ಹಿಂದೆ ಮಾಡಿದ್ದೇನು? ಇದು ಎಷ್ಟರಮಟ್ಟಿಗೆ ನ್ಯಾಯ? ಕಬಳಿಸಿರೋದು, ಕಳ್ಳತನ ಮಾಡಿರೋದು ಅಂತಾ ಹೇಳಿದ್ರಿ, ನಾವು ನಿಮಗೆ ಅವರದ್ದೇ ಭಾಷೆಯಲ್ಲಿ ಹೇಳ್ಬೇಕಾಗುತ್ತೆ ಎಂದು ಸಚಿವ ಪರಮೇಶ್ವರ್ ಕುಟುಕಿದ್ದಾರೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನಗಳನ್ನು ಹಿಂದಿರುಗಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಯ ನಿರ್ಧಾರವನ್ನು ತಪ್ಪು ಎಂದು ಬಣ್ಣಿಸಿರುವ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಅಶೋಕ್ ಅವರಿಂದ ರಾಜೀನಾಮೆ ಕೇಳುತ್ತಾರೆಯೇ ಎಂದು ಪ್ರಶ್ನಿಸಿದರು. ಬಿಜೆಪಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಅಕ್ರಮ ಭೂ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!