ಉಡುಪಿ: ದುಶ್ಚಟಮುಕ್ತ ಸಮಾಜಕ್ಕಾಗಿ ಬೃಹತ್ ಜನಜಾಗೃತಿ ಜಾಥಾಕ್ಕೆ ಚಾಲನೆ
ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಮದ್ಯಪಾನ, ದುಶ್ಚಟ, ಮಾದಕ ವಸ್ತುಗಳ ವಿರುದ್ಧ ಆಂದೋಲನ ಹಾಗೂ ಜನ ಜಾಗೃತಿಗಾಗಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್‌ನ ಉಡುಪಿ ಜಿಲ್ಲಾ ಘಟಕದ ವತಿಯಿಂದ ಬೃಹತ್ ಜನಜಾಗೃತಿ ಜಾಥಾಕ್ಕೆ ಇಂದು ನಗರದ ಜೋಡುರಸೆ ಬಳಿ ಚಾಲನೆ ನೀಡಲಾಯಿತು.
ದುಶ್ಚಟ ಮುಕ್ತ ಸಮಾಜದ ನಿರ್ಮಾಣಕ್ಕಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ಅವರು ಕೈಗೊಂಡಿರುವ ಬಹುಮುಖ್ಯ ಕಾರ್ಯಕ್ರಮ ಸಮಾಜದ ದುರ್ಬಲ ವರ್ಗಗಳಲ್ಲಿ ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸುವುದಾಗಿದೆ. ಇದಕ್ಕಾಗಿ ಸಮಾಜದ ಗಣ್ಯರ ಸಹಭಾಗಿತ್ವದಲ್ಲಿ ರಾಜ್ಯಮಟ್ಟದ ಜನಜಾಗೃತಿ ವೇದಿಕೆಯನ್ನು ಸ್ಥಾಪಿಸಲಾಗಿದ್ದು, ಅದರ ಮೂಲಕ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಬುಧವಾರ ಬೆಳಗ್ಗೆ ಜೋಡುಕಟ್ಟೆ ಬಳಿಕ ಬೃಹತ್ ಜಾಥಾಕ್ಕೆ ಚಾಲನೆ ನೀಡಲಾಯಿತು. ಸಾವಿರಾರು ಮಂದಿ ಜಾಗೃತಿ ಫಲಕ ಗಳೊಂದಿಗೆ ಜಾಥದಲ್ಲಿ ಭಾಗವಹಿಸಿದರು. ನಗರದ ಪ್ರಮುಖ ರಸ್ತೆಗಳ ಮೂಲಕ ಜಾಥಾ ಸಾಗಿ ಶ್ರೀಕೃಷ್ಣ ಮಠದ ರಾಜಾಂಗಣದ ಬಳಿ ಮುಕ್ತಾಯಗೊಂಡಿತು.
ಜೋಡುಕಟ್ಟೆಯಿಂದ ಕೋರ್ಟ್ ರಸ್ತೆ, ಕವಿಮುದ್ದಣ ರಸ್ತೆ ಮೂಲಕ ಮೆರವಣಿಗೆ ಸಾಗಿತು. ಮೆರವಣಿಗೆಯಲ್ಲಿ ಆಕರ್ಷಕ ಟ್ಯಾಬ್ಲೋಗಳು ಜನರ ಗಮನ ಸೆಳೆದವು. ಬಳಿಕ ರಾಜಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.