ಅ.4ರಿಂದ ಸರ್ಕಾರದ ಧೋರಣೆ ಖಂಡಿಸಿ ಗ್ರಾಮ ಪಂಚಾಯತ್‌ನ  ನೌಕರರು, ಅಧಿಕಾರಿಗಳ ಪ್ರತಿಭಟನೆ

ಉಡುಪಿ: ಎಲ್ಲಾ ಸಮಸ್ಯೆಗಳಿಗೂ ಪಂಚಾಯತ್ ಅಧಿಕಾರಿಗಳು ಮತ್ತು ನೌಕರರನ್ನು ನೇರ ಹೊಣೆ ಮಾಡುತ್ತಿರುವ ಸರ್ಕಾರ ಮತ್ತು ಇಲಾಖೆಯ ಧೋರಣೆಯನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಹಾಗೂ ನೌಕರರು ಅಕ್ಟೋಬರ್ 4ರಿಂದ ರಾಜ್ಯಾದ್ಯಂತ ಗ್ರಾಮ ಪಂಚಾಯಿತಿ ಸೇವೆಗಳನ್ನು ಸಂಪೂರ್ಣ ಸ್ಥಗಿತಗೊಳಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟಾವಧಿ ಹೋರಾಟ ನಡೆಸಲಿದ್ದಾರೆ. ಈ ಹೋರಾಟದಲ್ಲಿ ಉಡುಪಿ ಜಿಲ್ಲೆಯ ಎಲ್ಲಾ 155 ಗ್ರಾಮ ಪಂಚಾಯಿತಿಗಳ ನೌಕರರು, ಅಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ಪಿ ಶೆಟ್ಟಿ ಹೇಳಿದರು.

ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯದರ್ಶಿಗಳು ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರಿಗೆ ಭಡ್ತಿಯಿಲ್ಲದೆ ಜೀವನ ಪರ್ಯಂತ ಅದೇ ಕೆಲಸದಲ್ಲಿ ದುಡಿಯುವಂತಾಗಿದೆ. ಗ್ರಾಮ ಪಂಚಾಯಿತಿಯ ಕ್ಲರ್ಕ್, ಬಿಲ್ಲ್ ಕಲೆಕ್ಟರ್, ಡಾಟಾ ಎಂಟ್ರಿ ಆಪರೇಟರ್ ಗಳು, ವಾಟರ್ ಮ್ಯಾನ್ ಹಾಗೂ ಸ್ವಚ್ಛತಾ ಸಿಬ್ಬಂದಿ ಯಾವುದೇ ಸೌಲಭ್ಯ, ಸೇವಾ ಭದ್ರತೆ ಇಲ್ಲದೆ ಕನಿಷ್ಠ ವೇತನದಲ್ಲಿ ದುಡಿಯುತ್ತಿದ್ದಾರೆ. ಇಲಾಖೆಯ ಅಧಿಕಾರಿಗಳ ಅವೈಜ್ಞಾನಿಕ ಮತ್ತು ಕಾನೂನುಬಾಹಿರ ಆದೇಶ ಮತ್ತು ಸುತ್ತೋಲೆಗಳಿಂದ ಅಧಿಕಾರದ ವಿಕೇಂದ್ರೀಕರಣದ ಬದಲಾಗಿ ಕೇಂದ್ರೀಕರಣವಾಗುತ್ತಿದೆ. ಯಾವುದೇ ಯೋಜನೆಗಳನ್ನು ಜಾರಿಗೆ ತರುವ ಸಂದರ್ಭದಲ್ಲಿ ಪ್ರಾದೇಶಿಕ ಭಿನ್ನತೆಯನ್ನು ಪರಿಗಣಿಸದೆ ಏಕಪ್ರಕಾರವಾಗಿ ಯೋಜನೆಗಳ ಹೇರಿಕೆ ಮಾಡಲಾಗುತ್ತಿದೆ. ಸೂಕ್ತ ಮೂಲಭೂತ ಸೌಕರ್ಯಗಳನ್ನು ನೀಡದೆ, ಉತ್ತಮ ಕೆಲಸದ ವಾತಾವರಣವನ್ನು ಸೃಷ್ಟಿಸದೆ ಗ್ರಾಮ ಪಂಚಾಯತ್ ಅಧಿಕಾರಿ ಮತ್ತು ನೌಕರರನ್ನು ಶೋಷಣೆ ಮಾಡಲಾಗುತ್ತಿದೆ. ಇದರ ವಿರುದ್ಧ ಈ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಪರಿಷತ್ ಸದಸ್ಯ ಸಿದ್ದೇಶ್, ಗ್ರೇಡ್ ಒನ್ ಕಾರ್ಯದರ್ಶಿ ಸಂಘದ ಜಿಲ್ಲಾಧ್ಯಕ್ಷ ಶಿವರಾಜ್, ಗ್ರಾಮ ಪಂಚಾಯತ್ ನೌಕರರ ಸಂಘದ ಜಿಲ್ಲಾಧ್ಯಕ್ಷ ಪ್ರಶಾಂತ್, ಪ್ರಧಾನ ಕಾರ್ಯದರ್ಶಿ ರಮೇಶ್, ಪಿಡಿಒ ಸಂಘದ ಉಡುಪಿ ತಾಲೂಕು ಅಧ್ಯಕ್ಷ ಸಂತೋಷ್ ಜೋಗಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಫರ್ಜಾನ, ಮಾಜಿ ಉಪಾಧ್ಯಕ್ಷೆ ರಾಜೇಶ್ವರಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!