ಮುಡಾ ಹಗರಣ: 14 ನಿವೇಶನ ವಾಪಸ್ ನೀಡಲು ಸಿಎಂ ಸಿದ್ದರಾಮಯ್ಯ ಪತ್ನಿ ನಿರ್ಧಾರ, ಆಯುಕ್ತರಿಗೆ ಪತ್ರ!

ಮೈಸೂರು: ದೇಶದಾದ್ಯಂತ ರಾಜಕೀಯದಲ್ಲಿ ತೀವ್ರ ಚರ್ಚೆ, ಆರೋಪ, ಪ್ರತ್ಯಾರೋಪಗಳಿಗೆ ಕಾರಣವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ವಿರುದ್ಧದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನಿವೇಶನ ಹಗರಣಕ್ಕೆ ಮಹತ್ವದ ತಿರುವು ಸಿಕ್ಕಿದೆ.

ಮುಡಾ ನಿವೇಶನಗಳನ್ನು ವಾಪಸ್ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ. ಪಾರ್ವತಿ ಅವರು ನಿರ್ಧರಿಸಿದ್ದಾರೆ. ಈ ಸಂಬಂಧ ಮುಡಾ ಆಯುಕ್ತರಿಗೆ ಅವರು ಪತ್ರ ಬರೆದಿದ್ದಾರೆ.

ಮುಡಾ ಹಗರಣ ಸಂಬಂಧ ಸಿದ್ದರಾಮಯ್ಯ ಅವರ ವಿರುದ್ಧ ಇತ್ತೀಚಿಗೆ ದಾಖಲಾಗಿದ್ದ ಲೋಕಾಯುಕ್ತ ಎಫ್‌ಐಆರ್ ಅನ್ನು ಆಧರಿಸಿ ಇಡಿ ECIR ದಾಖಲಿಸಿದ ಬೆನ್ನಲ್ಲೇ ಪಾರ್ವತಿ ಅವರು ಪರಿಹಾರವಾಗಿ ಪಡೆಯಲಾದ 14 ನಿವೇಶಗಳನ್ನು ಮುಡಾಗೆ ಹಿಂತಿರುಗಿಸಲು ಒಪ್ಪಿದ್ದಾರೆ.

ಮೈಸೂರು ತಾಲ್ಲೂಕು, ಕಸಬಾ ಹೋಬಳಿ ಕೆಸರೆ ಗ್ರಾದ ಸರ್ವೇ ನಂಬರ್ 464ರಲ್ಲಿನ 3 ಎಕರೆ 16 ಗುಂಟೆ ವಿಸ್ತೀರ್ಣದ ಜಮೀನನ್ನು ಪ್ರಾಧಿಕಾರ ಭೂ ಸ್ವಾಧೀನವಿಲ್ಲದೆ ಉಪಯೋಗಿಸಿಕೊಂಡಿದ್ದಾಗಿ ಮುಡಾದಿಂದ ಪರಿಹಾರವಾಗಿ ವಿಜಯನಗರ 3 ಮತ್ತು 4ನೇ ಹಂತದಲ್ಲಿ ವಿವಿಧ ಅಳತೆಯ 14 ನಿವೇಶನಗಳ ಕ್ರಯ ಪತ್ರಗಳನ್ನು ರದ್ದುಗೊಳಿಸುವ ಮೂಲಕ ಪರಿಹಾರದ ನಿವೇಶನಗಳನ್ನು ಒಪ್ಪಿಸಲು ಹಾಗೂ ಹಿಂತಿರುಗಿಸಲು ಒಪ್ಪಿರುತ್ತೇನೆ. ಈ ನಿಟ್ಟಿನಲ್ಲಿ ಆದಷ್ಟುಬೇಗ ಅಗತ್ಯಕ್ರಮ ಕೈಗೊಳ್ಳಿ ಎಂದು ಮುಡಾ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಮುಡಾ ಹಗರಣದಲ್ಲಿ ಲೋಕಾಯುಕ್ತರು ದಾಖಲಿಸಿರುವ ಎಫ್ ಐಆರ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ A1 ಆರೋಪಿಯಾಗಿದ್ದಾರೆ. ಅವರ ಪತ್ನಿ ಬಿಎಂ ಪಾರ್ವತಿ A2, ಸಿದ್ದರಾಮಯ್ಯ ಅವರ ಬಾಮೈದ ಮಲ್ಲಿಕಾರ್ಜುನ ಸ್ವಾಮಿ A3 ಮತ್ತು ಭೂ ಮಾಲೀಕ ದೇವರಾಜು A4 ಆರೋಪಿಗಳಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!