ಜಿಪಂ, ತಾ.ಪಂ. ಚುನಾವಣೆಗಳಿಗೆ ಈಗಲೇ ಸಿದ್ಧತೆ ನಡೆಸಿ: ಅಶೋಕ ಕೊಡವೂರು
ಉಡುಪಿ: ಮುಂಬರುವ ವಿಧಾನಪರಿಷತ್, ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆ ಬಗ್ಗೆ ಕಾಂಗ್ರೆಸ್‌ನ ಪಂಚಾಯತ್‌ರಾಜ್ ಸಂಘಟನೆಯ ಕಾರ್ಯಕರ್ತರು ಹೆಚ್ಚಿನ ಜವಾಬ್ದಾರಿ ಯನ್ನು ವಹಿಸಿಕೊಂಡು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಶ್ರಮಿಸಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್‌ಕುಮಾರ್ ಕೊಡವೂರು ಪಕ್ಷದ ಕಾರ್ಯಕರ್ತರಿಗೆ ಹಾಗೂ ಸಂಘಟನೆಗಳಿಗೆ ಕರೆ ನೀಡಿದ್ದಾರೆ.
ಬ್ರಹ್ಮಗಿರಿಯಲ್ಲಿರುವ ಉಡುಪಿ ಕಾಂಗ್ರೆಸ್ ಭವನದಲ್ಲಿ ನಡೆದ ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಅವರು ಈ ವಿಷಯ ತಿಳಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ ಕಾಂಚನ್, ಬಿಜೆಪಿ ಪಕ್ಷ ಹಿಂದುತ್ವದ ಹೆಸರಲ್ಲಿ ಜನರನ್ನು ಮೋಸಗೊಳಿಸಿ ಗೆಲುವನ್ನು ಸಾಧಿಸುತ್ತಿದೆ. ಈ ಬಗ್ಗೆ ನಮ್ಮ ಪಕ್ಷದ ಕಾರ್ಯಕರ್ತರು ಪ್ರತಿ ಮನೆಗೆ ತೆರಳಿ ಬಿಜೆಪಿಯವರ ಈ ಡೋಂಗಿ ಹಿಂದುತ್ವವನ್ನು ಅವರಿಗೆ ಮನದಟ್ಟಾಗುವಂತೆ ವಿವರಿಸಿ ನಮ್ಮ ಪಕ್ಷವನ್ನು ಸಂಘಟಿಸುವ ಅವಶ್ಯಕತೆ ಇದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಮಾತಾಡಿ, ಮುಂದಿನ ದಿನಗಳಲ್ಲಿ ಸರಕಾರದ ವಿವಿಧ ಸಮಿತಿಗಳ ನೇಮಕಾತಿಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಹೆಚ್ಚಿನ ಆದ್ಯತೆ ನೀಡಲು ರಾಜ್ಯ ಹಾಗೂ ಜಿಲ್ಲೆಯ ನಾಯಕರ ಜೊತೆ ಮಾತನಾಡಬೇಕಾಗಿದೆ ಎಂದರು.
ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ಆನಂದ್ ಎನ್ ಪೂಜಾರಿ ಮಾತನಾಡಿದರು. ಮುಂಬರುವ ವಿಧಾನಪರಿಷತ್ ಚುನಾವಣೆಗೆ ಉಡುಪಿಯಲ್ಲಿ ಹೆಚ್ಚಿನ ಮತ ಕ್ರೋಢೀಕರಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಸುರೇಶ್ ಶೆಟ್ಟಿ ಬನ್ನಂಜೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಶರತ್ ಶೆಟ್ಟಿ, ರೋಷನ್ ಶೆಟ್ಟಿ, ಪಂಚಾಯತ್‌ರಾಜ್ ಸಂಘಟನೆ ಜಿಲ್ಲಾ ನಾಯಕಿ ಐರಿನ್ ಅಂದ್ರಾದೆ, ಉದಯ ಪೂಜಾರಿ, ಅನಿಲ್ ಕುಮಾರ್ ಹೆರ್ಗ, ತಾರಾ ಬನ್ನಂಜೆ, ಕುಮುದಾ ಕಡಿಯಾಳಿ, ಸುದೇಶ್ ಶೇಟ್ ಮುಂತಾದವರು ಉಪಸ್ಥಿತರಿದ್ದರು.
ಶೇಖರ್ ಶೆಟ್ಟಿ ಬನ್ನಂಜೆ ಸ್ವಾಗತಿಸಿ, ಸುರೇಶ್ ತೆಂಕನಿಡಿಯೂರು ವಂದಿಸಿದರು.