ಮಹಿಷಾಸುರ ದಲಿತರ ಮಹಾ ಅಸ್ಮಿತೆ: ಜಯನ್ ಮಲ್ಪೆ

Oplus_131072

ಉಡುಪಿ: ಭಾರತದ ಇತಿಹಾಸವೆಂದರೆ ಬ್ರಾಹ್ಮಣರ ಮತ್ತು ದಲಿತರ ನಡುವಿನ ಸಂಘರ್ಷದ ಇತಿಹಾಸ. ಮಹಿಷ ಮಂಡಲದ ಮಹಿಷಾಸುರ ನಾಡಿನ ಸಾಂಸ್ಕೃತಿಕ ನಾಯಕ ಹಾಗೂ ದಲಿತರ ಮಹಾ ಅಸ್ಮಿತೆ ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.

ಅವರು ಅಂಬೇಡ್ಕರ್ ಯುವಸೇನೆ ಉಡುಪಿ ಜಿಲ್ಲಾ ಘಟಕ ಮಲ್ಪೆ ಸರಸ್ವತಿ ಬಯಲು ರಂಗಮಂದಿರದಲ್ಲಿ ಆಯೋಜಿಸಿದ ಮಹಿಷಾಸುರನಿಗೆ ಪುಷ್ಪಾರ್ಚನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ,
ಭಾರತದಲ್ಲಿ ಮನುವಾದಿಗಳು ಪುರಾಣ ಮತ್ತು ಮಹಾಕಾವ್ಯಗಳನ್ನು ಇತಿಹಾಸವೆಂದು ಬಣ್ಣಿಸಿ ಇಲ್ಲಿನ ದಲಿತರನ್ನು ದಾರಿತಪ್ಪಿಸಿದ್ದಾರೆ. ಮಹಿಷಾಸುರನ ಪಾತ್ರವನ್ನು ಪುರಾಣಗಳು ಸೃಷ್ಟಿಸಿರುವ ಬಗೆ ಆಕ್ಷೇಪಾರ್ಹವಾದದ್ದು. ವೈದಿಕ ಸಿದ್ಧಾಂತವನ್ನು ವಿರೋಧಿಸುವವರನ್ನು ರಾಕ್ಷಸ ಎಂದು ಬಿಂಬಿಸಲಾಗಿದೆ ಎಂದ ಜಯನ್ ಮಲ್ಪೆ, ಮಹಿಷಾಸುರ ರಾಕ್ಷಸನಲ್ಲ, ಆತನು ಮಹಾರಕ್ಷಕ ಎಂದು ಪ್ರತಿಪಾದಿಸಿದರು.

ಸುಳ್ಳೆಂಬ ಮೋಡಗಳು ಸತ್ಯವೆಂಬ ಸೂರ್ಯನನ್ನು ಮುಚ್ಚಿಡಲು ಸಾಧ್ಯವಿಲ್ಲ.ಅಂತೆಯೇ ಪುರಾಣವೆಂಬ ಕತ್ತಲೆಯಿಂದ ಇತಿಹಾಸದ ಬೆಳಕಿನಡೆಗೆ ದಲಿತರನ್ನು ಮುನ್ನಡೆಸುವುದೇ ಮಹಿಷಾಸುರನ ಪ್ರತಿಸಂಸ್ಕೃತಿ ಹಬ್ಬ ಎಂದರು. ಅಂಬೇಡ್ಕರ್ ಯುವಸೇನೆಯ ಸ್ಥಾಪಕ ಅಧ್ಯಕ್ಷ ಹರೀಸ್ ಸಾಲ್ಯಾನ್ ಮಾತನಾಡಿ, ವೈದಿಕರು ಬಲಿ ಚಕ್ರವರ್ತಿ,ರಾವಣ,ನರಕಾಸುರ,ಮಹಿಷಾಸುರ ಮುಂತಾದ ಮಹಾರಾಜರನ್ನು ಹೇಯವಾಗಿ ಚಿತ್ರಿಸಿದ್ದಾರೆ. ಈ ಹಿನ್ನಲೆಯಲ್ಲಿ ದಲಿತರು ಪುರಾಣವನ್ನು ತಿರಸ್ಕರಿಸಿ ಇತಿಹಾಸದ ಮರುವ್ಯಾಖ್ಯಾನಕ್ಕೆ ಮುಂದಾಗುವ ಅನಿವಾರ್ಯತೆ ಹಿಂದಿಗಿಂತ ಇಂದು ಹೆಚ್ಚಿದೆ ಎಂದರು.

ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ಮಾತನಾಡಿ ಈ ಬಾರಿ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಮಹಿಷಾಸುರನಿಗೆ ಸಾಂಕೇತಿಕವಾಗಿ ಪುಷ್ಪಾರ್ಚನೆ ಕಾರ್ಯಕ್ರಮ ಆಯೋಜಿಸಿದ್ದು, ಮುಂದಿನ ವರ್ಷ ಉಡುಪಿ ಜಿಲ್ಲೆಯ ಎಲ್ಲಾ ಗ್ರಾಮ ಹೋಬಳಿ ಮಟ್ಟದಲ್ಲಿ ಮಹಿಷಾಸುರ ದಸರಾ ಏರ್ಪಡಿಸುವುದಾಗಿ ಹೇಳಿದರು. ದಲಿತ ಮುಖಂಡರಾದ ಭಗವಾನ್, ಸತೀಶ್ ಕಪ್ಪೆಟ್ಟು,ಪ್ರಸಾದ್ ಮಲ್ಪೆ, ಅರುಣ್ ಸಾಲ್ಯಾನ್, ಸಾಧು ಚಿಟ್ಪಾಡಿ, ಸುಶೀಲ್ ಕುಮಾರ್, ವಸಂತ ಅಂಬಲಪಾಡಿ, ಸುಧಾಕರ್ ನೆರ್ಗಿ,ಯೋಗೀಶ್‌ಮಲ್ಪೆ, ಸುರೇಶ್ ತೊಟ್ಟಂ,ವಿನಯ ಬಲರಾಮನಗರ, ನಗರಸಭೆಯ ಮಾಜಿ ಉಪಾಧ್ಯಕ್ಷೆ ಸಂಧ್ಯಾ ತಿಲಕ್‌ರಾಜ್, ಪೂರ್ಣಿಮಾ ಸದಾನಂದ,ಪ್ರಮೀಳ ಹರೀಶ್,ವಿನೋಧ ಜಯರಾಜ್,ಚಿತ್ರಾಕ್ಷಿ ಕದಿಕೆ ಮುಂತಾದವರು ಭಾಗವಹಿಸಿದ್ದರು.ದೀಪಕ್ ಕೊಡವೂರು ಸ್ವಾಗತಿಸಿ, ಗುಣವಂತ ತೊಟ್ಟಂ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!