ಚುನಾವಣಾ ಬಾಂಡ್ ಹಗರಣದ ನಿರ್ಮಲಾ, ವಿಜಯೇಂದ್ರ, ನಳಿನ್ ರಾಜೀನಾಮೆ ಯಾವಾಗ ಕೇಳುತ್ತಿರಿ?- ಕಾಂಚನ್

ಉಡುಪಿ: ಮುಡಾ ಹಗರಣಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ವಿರುದ್ಧ ಲೋಕಾಯಕ್ತದಲ್ಲಿ ಎಫ್.ಐ.ಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸುತ್ತಿರುವ ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ ಹಾಗೂ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು 6 ಸಾವಿರ ಕೋಟಿ ರೂ. ಮೊತ್ತದ ಚುನಾವಣಾ ಬಾಂಡ್ ಹಗರಣದಲ್ಲಿ ಸಿಲುಕಿರುವ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಡಿನೋಟಿಫೈ ಹಗರಣದಲ್ಲಿ ಸಿಲುಕಿರುವ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಮೊದಲು ರಾಜೀನಾಮೆ ನೀಡುವಂತೆ ಒತ್ತಾಯಿಸುವುದು ಯಾವಾಗ? ಅದಕ್ಕಾಗಿಯೇ ಯಾವುದಾದರೂ ಮುಹೂರ್ತ ಗೊತ್ತುಪಡಿಸಿದ್ದೀರಾ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಪ್ರಶ್ನಿಸಿದ್ದಾರೆ.

ಗಂಗೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣ ಮತ್ತು ಜಂತಕಲ್ ಮೈನಿಂಗ್ ಪ್ರಕರಣದಲ್ಲಿ ಎಚ್.ಡಿ ಕುಮಾರಸ್ವಾಮಿ ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಗಂಗೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿಂತೆ ಎಚ್.ಡಿ ಕುಮಾರಸ್ವಾಮಿ ಲೋಕಾಯುಕ್ತ ವಿಚಾರಣೆಯನ್ನು ಎದುರಿಸಿದ್ದಾರೆ. ಅದಕ್ಕಿಂತಲೂ ಮುಖ್ಯವಾಗಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಇಡೀ ದೇಶದಲ್ಲೇ ಸದ್ದು ಮಾಡಿದ್ದ ಕೋಟ್ಯಾಂತರ ರೂಪಾಯಿ ಚುನಾವಣಾ ಬಾಂಡ್ ವಿಚಾರವಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಮಾಜಿ ಸಂಸದರಾದ ನಳಿನ್ ಕುಮಾರ್ ಸೇರಿದಂತೆ ಹಲವರ ವಿರುದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶದಂತೆ ಎಫ್.ಐ.ಆರ್ ದಾಖಲಾಗಿದೆ.

ದೇಶದ ಕಾನೂನು ಎಲ್ಲರಿಗೂ ಒಂದೇ ಎನ್ನುವ ಬಿಜೆಪಿಗರು ಹೇಗೆ ಮುಡಾ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಸೂಚನೆಯಂತೆ ಸಿದ್ದರಾಮಯ್ಯ ಅವರ ವಿರುದ್ದ ಎಫ್.ಐ.ಆರ್ ದಾಖಲಾದ ಕೂಡಲೇ ತಮ್ಮ ಎಲ್ಲಾ ರೀತಿಯ ಶಕ್ತಿಯನ್ನು ಉಪಯೋಗಿಸಿ ಅರಚಾಟ ಮಾಡಿ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದಾರೆ ಹಾಗಿದ್ದ ಮೇಲೆ ಸದ್ಯ ಕೇಂದ್ರದ ಪ್ರಭಾವಿ ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯದ ಪ್ರಭಾವಿ ನಾಯಕರಾದ ವಿಜಯೇಂದ್ರ ಹಾಗೂ ನಳಿನ್ ಕುಮಾರ್ ಮೇಲೆ ಎಫ್.ಐ.ಆರ್ ದಾಖಲಾದ ವಿಚಾರ ಇನ್ನೂ ಕೂಡ ಬಿಜೆಪಿಯ ನಾಯಕರು ಹಾಗೂ ಉಡುಪಿ ಶಾಸಕರು, ಸಂಸದರ ಗಮನಕ್ಕೆ ಬಂದಿಲ್ಲವೇ ಅಥವಾ ತಾವು ಜಾಣ ಕುರುಡು ಪ್ರದರ್ಶಿಸುತ್ತಿದ್ದೀರಾ?

ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುವ ತಾವು ಅವರಂತೆಯೇ ತಮ್ಮದೇ ಬಿಜೆಪಿ ನೇತೃತ್ವದ ಸರಕಾರದ ಇಬ್ಬರು ಸಚಿವರು ಹಾಗೂ ಇತರ ನಾಯಕರ ಮೇಲೆ ದಾಖಲಾಗಿರುವ ಎಫ್.ಐ.ಆರ್ ಮುಂದಿಟ್ಟುಕೊಂಡು ಅವರುಗಳ ರಾಜೀನಾಮೆ ಕೇಳುವ ದಮ್ಮು ಮತ್ತು ತಾಕತ್ತು ಪ್ರದರ್ಶಿಸಿ ಆಗ ಜನರು ನಿಮ್ಮನ್ನು ಶಾಸಕ ಸಂಸದರನ್ನಾಗಿ ಆಯ್ಕೆ ಮಾಡಿರುವುದು ಸಾರ್ಥಕ ಎನಿಸುತ್ತದೆ. ಅದರ ಬದಲು ಸಿದ್ದರಾಮಯ್ಯರಿಗೊಂದು ನ್ಯಾಯ, ನಿರ್ಮಲಾ ಸೀತರಾಮನ್ ಅವರಿಗೊಂದು ನ್ಯಾಯ ಮಾಡಲು ಹೋದರೆ ಜಿಲ್ಲೆಯ ಜನ ನಿಮ್ಮನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎನ್ನುವುದು ಮರೆಯಬೇಡಿ.

ರಾಜೀನಾಮೆ ಕೇಳುವುದು ಬಿಟ್ಟು ಶಾಸಕ ಮತ್ತು ಸಂಸದರು ನಿಮ್ಮ ಕ್ಷೇತ್ರ ವ್ಯಾಪ್ತಿಯ ಸಂತೆಕಟ್ಟೆ, ಇಂದ್ರಾಳಿ, ಮಲ್ಪೆ, ಪರ್ಕಳ ರಸ್ತೆಯ ದುರವಸ್ಥೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಕೆಲಸ ಮೊದಲು ಮಾಡಿ. ಕೇವಲ ಹೇಳಿಕೆಗಳಲ್ಲಿ ಇಂದು ಕಾಮಗಾರಿ ಅಂತ್ಯವಾಗುತ್ತದೆ ನಾಳೆ ಆಗುತ್ತದೆ ಎಂದು ಜನರನ್ನು ದಾರಿ ತಪ್ಪಿಸಬೇಡಿ. ತಾವು ಈಗಾಗಲೇ ನೀಡಿರುವ ಗಡುವು ಹಲವು ಬಾರಿ ಮುಗಿದು ಹೋಗಿದೆ ಎನ್ನುವುದು ನಿಮಗೆ ಮರೆತಿರಬಹುದು ಆದರೆ ಪ್ರತಿನಿತ್ಯ ಅದೇ ರಸ್ತೆಗಳಲ್ಲಿ ಜೀವವನ್ನು ಕೈಯಲ್ಲಿಟ್ಟು ಕೊಂಡು ತೆರಳುತ್ತಿರುವ ಜನರು ಹಾಗೂ ವಾಹನ ಸವಾರರು ಮರೆತಿಲ್ಲ. ಉಡುಪಿಯ ಸಂಸದ ಮತ್ತು ಶಾಸಕರು ಈ ವಿಚಾರವಾಗಿ ಮೊದಲು ಗಮನ ಹರಿಸಿ ಬಳಿಕ ಸಿದ್ದರಾಮಯ್ಯರ ರಾಜೀನಾಮೆ ಕೇಳುವ ಕೆಲಸ ಮಾಡಲಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!