ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್‌ನಿಂದ ಉದ್ಯಮಿ ಹರಿಪ್ರಸಾದ್ ರೈ ಹೆಸರು ಮೂಂಚಿಣಿಗೆ
ಉಡುಪಿ: ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರಿಂದ ತೆರವಾದ ವಿಧಾನ ಪರಿಷತ್ ದ.ಕ. ಸ್ಥಳೀಯ ಪ್ರಾಧಿಕಾರ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆ ಸಂಬಂಧ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಕಸರತ್ತುಗಳು ನಡೆಯುತ್ತಿದ್ದು, ಕಾಂಗ್ರೆಸ್‌ನಿಂದ ಮೂವರು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ಹೈಕಮಾಂಡ್‌ಗೆ ಕಳುಹಿಸಲಾಗಿದೆ.
ಈ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಟಿಕೇಟಿಗಾಗಿ ಉದ್ಯಮಿ, ಸಮಾಜ ಸೇವಕ, ಚಿತ್ರನಿರ್ಮಾಪಕ ಹರಿಪ್ರಸಾದ್ ರೈ ಅವರು ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದು ಟಿಕೆಟ್ ಗಿಟ್ಟಿಸುವಲ್ಲಿ ಮೂಂಚಣಿಯಲ್ಲಿದ್ದಾರೆ. ಈಗಾಗಲೇ ಅವರು ಕೆಪಿಸಿಸಿ ಕಟ್ಟಡ ನಿಧಿಗೆ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.
ಹರಿಪ್ರಸಾದ್ ರೈ ಅವರು ಕ್ರೀಡೆ, ಶಿಕ್ಷಣ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಅನನ್ಯ ಸೇವೆ ನೀಡುತ್ತಾ ಬಂದಿದ್ದು ನೂರಾರು ಜನರಿಗೆ ಉದ್ಯೋಗ ನೀಡಿದ ಹೆಗ್ಗಳಿಕೆ ಇದೆ.
ಅದೇ ರೀತಿ ಮಾಜಿ ಜಿಪಂ ಅಧ್ಯಕ್ಷರಾದ ಬೈಂದೂರು ರಾಜು ಪೂಜಾರಿ, ಕಾರ್ಕಳ ಕಾಂಗ್ರೆಸ್ ಮುಖಂಡ ಡಿ.ಆರ್.ರಾಜು ಅವರು ಕೂಡ ಆಕಾಂಕ್ಷಿಗಳಾಗಿದ್ದಾರೆ.
ಇಂದು ಮಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕುರಿತು ಚರ್ಚೆ ನಡೆದಿದ್ದು, ಇಲ್ಲಿ ರಾಜು ಪೂಜಾರಿ, ಡಿ.ಆರ್.ರಾಜು ಹಾಗೂ ಹರಿಪ್ರಸಾದ್ ರೈ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಮತ ಗಳಲ್ಲಿ ಬಿಲ್ಲವ ಮತಗಳ ಸಂಖ್ಯೆ ಜಾಸ್ತಿ ಇದ್ದು, ಹಾಗಾಗಿ ಬಿಲ್ಲವ ಸಮುದಾಯದವರಿಗೆಯೇ ಟಿಕೆಟ್ ನೀಡಬೇಕೆಂಬ ಕೂಗು ಕೇಳಿಬರುತ್ತಿವೆ. ಆದರೆ ಯುವ ಮುಖಗಳಿಗೆ ಮಣೆ ಹಾಕಬೇಕೆಂಬ ಕೂಗು ಕಾರ್ಯಕರ್ತರಿಂದ ಕೇಳಿ ಬರುತ್ತಿದ್ದು, ಜಿಲ್ಲಾ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಮುನ್ನಡೆಸಲು ಯುವ ನಾಯಕನ ಅಗತ್ಯತೆ ಇದ್ದು ಹರಿಪ್ರಸಾದ್ ರೈ ಅವರಂತಹ ಉತ್ಸಾಹಿ ನಾಯಕರಿಗೆ ಹೈಕಮಾಂಡ್ ಆಸ್ಪಾದ ಮಾಡಿಕೊಡಬೇಕೆಂದು ಹಿರಿಯ ಕಾಂಗ್ರೆಸ್ ಕಾರ್ಯಕರ್ತರು ಆಗ್ರಹಿಸಿದ್ದಾರೆ.