ವೈಫಲ್ಯ ಮರೆಮಾಚಲು ಶಾಸಕ ಯಶ್‌ಪಾಲ್ ಸುವರ್ಣರಿಂದ ಆಧಾರರಹಿತ ಆರೋಪ: ಪ್ರಸಾದ್ ರಾಜ್ ಕಾಂಚನ್
ಉಡುಪಿ: ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ತನ್ನ ವೈಫಲ್ಯವನ್ನು ಮರೆಮಾಚಲು ರಾಜ್ಯ ಸರಕಾರದ ವಿರುದ್ಧ ಆಧಾರ ರಹಿತ ವ್ಯರ್ಥ ಆರೋಪ ಮಾಡುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ಅವರ ವಿರುದ್ಧ ಕಾಂಗ್ರೆಸ್ ಪಕ್ಷ ಬೀದಿಗಿಳಿದು ಹೋರಾಟ ಮಾಡುತ್ತದೆ ಎಂದು ಕಾಂಗ್ರೆಸ್ ಮುಖಂಡ ಪ್ರಸಾದ್‌ರಾಜ್ ಕಾಂಚನ್ ಎಚ್ಚರಿಕೆ ನೀಡಿದ್ದಾರೆ.
ಉಡುಪಿಯ ಡಯಾನ ಹೊಟೇಲ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2016ರ ಸುತ್ತೋಲೆಯಂತೆ 1.20ಲಕ್ಷ ರೂ.ಕ್ಕಿಂತ ಹೆಚ್ಚಿನ ಆದಾಯವಿರುವ ಕುಟುಂಬಗಳು ಬಿಪಿಎಲ್ ಕಾರ್ಡ್‌ನ ವ್ಯಾಪ್ತಿಗೆ ಬರುವುದಿಲ್ಲ. ಅದರಂತೆ ಜಿಲ್ಲೆಯಲ್ಲಿ 38765 ಕುಟುಂಬಗಳು ಈ ಬಾರಿ ಅನರ್ಹರಾಗಿದ್ದು, ಬಿಪಿಎಲ್ ಕಾರ್ಡ್‌ನಿಂದ ಎಪಿಎಲ್ ಕಾರ್ಡ್‌ಗೆ ವರ್ಗಾವಣೆ ಮಾಡಲಾಗುತ್ತದೆ. ಶಾಸಕರು ಈ ಕುರಿತು ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ತಮ್ಮ ಹೇಳಿಕೆಯನ್ನು ಸಾಬೀತು ಮಾಡಲು ಸಾಧ್ಯವಾಗದಿದ್ದರೆ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಬದ್ಧರಾಗಿದ್ದಾರೆಯೇ ಎಂದು ಪ್ರಶ್ನಿಸಿದರು.
ಶಾಸಕರು ಉಡುಪಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ, ಜನರ ಕಷ್ಟಗಳಿಗೆ ಸ್ಪಂದಿಸುವ ಮನಸ್ಸಿದರೆ ತನ್ನ ವೈಯಕ್ತಿಕ ವರ್ಚಸ್ಸು ಬಳಸಿ ಹೆಚ್ಚಿನ ಅನುದಾನ ತರುವ ಕಾರ್ಯ ಮಾಡಬೇಕು. ರಾಜ್ಯದಲ್ಲಿ ಅನುದಾನದಲ್ಲಿ ಯಾವುದೇ ಕಡಿತವಾಗಿಲ್ಲ. ಬಜೆಟ್‌ನಲ್ಲಿ ಮೀನುಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಅನುದಾನ ಮೀಸಲು ಇರಿಸಲಾಗಿದೆ. ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ತಮ್ಮ ಕ್ಷೇತ್ರಕ್ಕೆ ಅನುದಾನ ತರುವ ಕಾರ್ಯವ ನ್ನು ಶಾಸಕರು ಮಾಡಬೇಕು ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಕೋಮು ಗಲಭೆ ಸೃಷ್ಟಿಸಿ ಜನರ ದಿಕ್ಕನ್ನು ತಪ್ಪಿಸಿ ಶಾಸಕರಾಗಿರುವ ಯಶಪಾಲ್ ಸುವರ್ಣ, ಜಾತಿ, ಧರ್ಮದ ವಿಚಾರವನ್ನು ಇಟ್ಟುಕೊಂಡು ಸತ್ಯಕ್ಕೆ ದೂರವಾದ ವಿಚಾರದಲ್ಲಿ ಅನಗತ್ಯವಾಗಿ ಆರೋಪ ಮಾಡುತ್ತಿದ್ದಾರೆ. ಈ ರೀತಿಯ ಆರೋಪ ಮಾಡಿದರೆ ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಉಡುಪಿಯ ಶಿಕ್ಷಣ ಸಂಸ್ಥೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ತೆಂಕನಿಡಿಯೂರು ಸರಕಾರಿ ಕಾಲೇಜಿನಲ್ಲಿ 1.12ಲಕ್ಷ ರೂ. ವಿದ್ಯುತ್ ಬಿಲ್ ಬಾಕಿ ಇತ್ತು. ಈ ಬಗ್ಗೆ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದು, ಯಾವುದೇ ಶಿಕ್ಷಣ ಸಂಸ್ಥೆಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸ ದಂತೆ ಸಚಿವ ಸಂಪುಟದಲ್ಲಿ ಚರ್ಚಿಸಿ ಆದೇಶವನ್ನು ಹೊರಡಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನಕರ ಹೇರೂರು, ಎನ್‌ಎಸ್‌ಯುಐ ಜಿಲ್ಲಾ ಉಪಾಧ್ಯಕ್ಷ ಶರತ್ ಕುಂದರ್ ಉಪಸ್ಥಿತರಿದ್ದರು.