ಉಡುಪಿ: ಸೇವೆಗಳನ್ನು ಸ್ಥಗಿತಗೊಳಿಸಿ ಗ್ರಾಮ ಆಡಳಿತ ಅಧಿಕಾರಿಗಳಿಂದ ಅನಿರ್ಧಿಷ್ಟಾವಧಿ ಮುಷ್ಕರ

21 ಆ್ಯಪ್ ಗಳ ಕೆಲಸದಿಂದ ಒತ್ತಡಕ್ಕೆ ಸಿಲುಕಿದ್ದೇವೆ: ಭರತ್ ಶೆಟ್ಟಿ

ಉಡುಪಿ: ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಹಾಗೂ ಮೊಬೈಲ್ ಆ್ಯಪ್ ನ ಒತ್ತಡ ನಿಲ್ಲಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಜಿಲ್ಲೆಯ ಏಳು ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳು ಎಲ್ಲ ಬಗೆಯ ಸೇವೆಗಳನ್ನು ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ.

ಉಡುಪಿ ಜಿಲ್ಲಾ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ನೇತೃತ್ವದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ಕೈಗೆ ಕಪ್ಪು ಪಟ್ಟಿ ಧರಿಸಿಕೊಂಡು ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಇಂದು ಧರಣಿ ನಡೆಸಿದರು.
ಧರಣಿ ಉದ್ದೇಶಿಸಿ ಉಡುಪಿ ಜಿಲ್ಲಾ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ಭರತ್ ಶೆಟ್ಟಿ ಮಾತನಾಡಿ, ಪ್ರಸ್ತುತ ನಾವು 21 ಆ್ಯಪ್ ಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದೇವೆ. ಇದರಿಂದ ಬಹಳಷ್ಟು ಒತ್ತಡಕ್ಕೆ ಸಿಲುಕಿದ್ದೇವೆ. ಹೀಗಾಗಿ ಇದನ್ನು ಸ್ಥಗಿತಗೊಳಿಸಬೇಕು. ಪತಿ ಪತ್ನಿ ಪ್ರಕರಣದಲ್ಲಿ ಅಂತರ್ ಜಿಲ್ಲಾ ವರ್ಗಾವಣೆಗೆ ಅವಕಾಶ ಕಲ್ಪಿಸಿಕೊಡಬೇಕು. 15ರಿಂದ 20 ವರ್ಷಗಳಿಂದ ಒಂದೇ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವವರಿಗೆ ಭಡ್ತಿ ನೀಡಬೇಕು. ಹಾಗೆ ಸುಸಜ್ಜಿತ ಕಚೇರಿ, ಮೊಬೈಲ್ ಸಹಿತ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.

ಉಡುಪಿ ತಾಲೂಕು ಸಂಘದ ಉಪಾಧ್ಯಕ್ಷೆ ರೇಷ್ಮಾ ಮಾತನಾಡಿ, ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ನಮ್ಮ ಸ್ವಂತ ಮೊಬೈಲ್ ನಲ್ಲಿ ವೈಯಕ್ತಿಕ ಡೇಟಾ ಬಳಸಿಕೊಂಡು ಕೆಲಸ ಮಾಡಬೇಕಾದ ಸ್ಥಿತಿ ಇದೆ. ಎಲ್ಲ ವಿಷಯಗಳ ಪ್ರೊಗ್ರೆಸ್ ಅನ್ನು ಒಂದೇ ಬಾರಿ ಕೇಳ್ತಾರೆ. ಇದರಿಂದ ನಾವು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದೇವೆ ಎಂದು ಅಳಲು ತೋಡಿಕೊಂಡರು. ನಾವು ಕೆಲಸ ಮಾಡಲು ಸಿದ್ಧರಿದ್ದೇವೆ. ಆದರೆ, ಸೌಕರ್ಯಗಳ ಜೊತೆಗೆ ಕಾಲಾವಕಾಶವನ್ನು ನೀಡಬೇಕು. ಕ್ಷೇತ್ರಮಟ್ಟದ ಕಾರ್ಯ ಒಂದೇ ತರ ಇರುವುದಿಲ್ಲ. ಒಂದು ಅಧಿಕಾರಿಗೆ ಒಂದು ರೀತಿಯ ಭೌಗೋಳಿಕ ಕ್ಷೇತ್ರ ಇದ್ದರೆ, ಮತ್ತೊಂದು ಅಧಿಕಾರಿಗೆ ಇನ್ನೊಂದು ರೀತಿಯ ಭೌಗೋಳಿಕ ಕ್ಷೇತ್ರ ಇರುತ್ತದೆ. ಅದನ್ನು ಪರಿಗಣಿಸದೆ ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳಿಂದ ಒಂದೇ ರೀತಿಯ ಪ್ರೊಗ್ರೆಸ್ ಕೇಳ್ತಾರೆ. ಇದನ್ನು ನಿಲ್ಲಿಸಬೇಕು. ಕರ್ತವ್ಯದ ಸಮಯವನ್ನು ಬೆಳಿಗ್ಗೆ 10ರಿಂದ ಸಂಜೆ 5.30ಕ್ಕೆ ಸೀಮಿತಗೊಳಿಸಬೇಕು. ಆ ಮೂಲಕ ನಮ್ಮ ವೈಯಕ್ತಿಕ ಜೀವನಕ್ಕೂ ಸಮಯ ಕೊಡಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.

ಗ್ರಾಮ ಆಡಳಿತ ಅಧಿಕಾರಿ ಭವ್ಯ ಮಾತನಾಡಿ, ಸದ್ಯ ಕಂದಾಯ ಇಲಾಖೆಯ ಕರ್ತವ್ಯಗಳಿಂದ ವೈಯಕ್ತಿಕವಾಗಿ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ. ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಇದೆ. 21 ಆ್ಯಪ್ ಗಳ ಮೂಲಕ‌ ಕೆಲಸ ಮಾಡುವುದರ ಜೊತೆಗೆ ಇತರ ಅನೇಕ ಕೆಲಸಗಳನ್ನು ನಿರ್ವಹಿಸಬೇಕಾಗಿದೆ. ಕಂದಾಯ ಇಲಾಖೆಯ ಒತ್ತಡದ ಕೆಲಸದಿಂದ ನಮಗೆ ನೆಮ್ಮದಿ ಇಲ್ಲದಂತಾಗಿದೆ. ನಾವು ಬಹಳಷ್ಟು ಕಷ್ಟಪಟ್ಟು ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಈ ಎಲ್ಲ ಕಷ್ಟಗಳ ವಿರುದ್ಧವಾಗಿ ನಾವು ಮುಷ್ಕರ ನಡೆಸುತ್ತಿದ್ದೇವೆ ಎಂದರು.

Leave a Reply

Your email address will not be published. Required fields are marked *

error: Content is protected !!