ಉಪಚುನಾವಣೆ: ರಾಜ್ಯದಲ್ಲಿ ಗೆಲುವಿನ ಹಾದಿಯತ್ತ ಬಿಜೆಪಿ, ನಾಯಕರಿಂದ ಸಿಹಿ ಹಂಚಿ ಸಂಭ್ರಮ
ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿರುವ ರಾಜ್ಯ ಉಪಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ವರೆಗಿನ ಬೆಳವಣಿಗೆಯವರೆಗೂ ರಾಜರಾಜೇಶ್ವರಿ ನಗರ 17ನೇ ಸುತ್ತಿನ ಹಾಗೂ ಶಿರಾದಲ್ಲಿ 15ನೇ ಸುತ್ತಿನ ಮತಎಣಿಕೆ ನಡೆದಿದ್ದು, ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.
ರಾಜರಾಜೇಶ್ವರಿ ನಗರದಲ್ಲಿ 17ನೇ ಸುತ್ತಿನ ಮತ ಎಣಿಕೆ ಅಂತ್ಯಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು 38,288 ಮತಗಳೊಂದಿಗೆ ಮುನ್ನಡೆ ಸಾಧಿಸಿದ್ದಾರೆ. ಇನ್ನು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು 49,918 ಮತಗಳನ್ನು ಪಡೆದಿದ್ದು, ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿಯವರು 6940 ಮತಗಳನ್ನು ಪಡೆದಿದ್ದಾರೆ.
ಇನ್ನು ತುಮಕೂರು ಜಿಲ್ಲೆ ವಿಧಾನಸಭಾ ಕ್ಷೇತ್ರದಲ್ಲಿ 15ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದ್ದು, ಇಲ್ಲೂ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಅವರು ಮುನ್ನಡೆ ಸಾಧಿಸಿದ್ದಾರೆ. ರಾಜೇಶ್ ಗೌಡ ಅವರು 43,684 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಟಿಬಿ ಜಯಚಂದ್ರ ಅವರಿಗೆ 41,919 ಮತಗಳು, ಜೆಡಿಎಸ್ ಅಭ್ಯರ್ಥಿಗಳು ಅಮ್ಮಾಜಮ್ಮಗೆ 23,051 ಮತಗಳು ಬಂದಿವೆ.
ಈ ನಡುವೆ ಎರಡೂ ಕ್ಷೇತ್ರದಲ್ಲೂ ಆರಂಭಿಕ ಹಂತದ ಮತಎಣಿಕೆಯಿಂದಲೂ ಬಿಜೆಪಿ ಮುನ್ನಡೆ ಸಾಧಿಸಿಕೊಂಡು ಬಂದಿರುವ ಹಿನ್ನೆಲೆಯಲ್ಲಿ ರಾಜ್ಯದ ಕಮಲ ಪಾಳಯದಲ್ಲಿ ಸಂಭ್ರಮ ಮನೆ ಮಾಡಿದೆ. ಗೆಲುವಿನ ಹಂತ ತಲುಪಿರುವ ಹಿನ್ನೆಲೆಯಲ್ಲಿ ಸಚಿವ ಬಿ ಶ್ರೀರಾಮುಲು, ಆರ್.ಅಶೋಕ, ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿಯ ಇತರೆ ನಾಯಕರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿ ಸಿಹಿ ಹಂಚಿ, ಸಂಭ್ರಮ ಆಚರಿಸುತ್ತಿದ್ದಾರೆ.