ಅ.3-12: ‘ಉಡುಪಿ ಉಚ್ಚಿಲ ದಸರಾ-2024’

Oplus_131072

ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ ಹಾಗೂ ಭಕ್ತಾಭಿ ಮಾನಿಗಳ ಸಹಕಾರ ಸಹಯೋಗದಲ್ಲಿ 3ನೇ ವರ್ಷದ ‘ಉಡುಪಿ ಉಚ್ಚಿಲ ದಸರಾ-2024’ ಅ.3ರಿಂದ 12ರವರೆಗೆ ಶ್ರೀಕ್ಷೇತ್ರದ ಶ್ರೀಮತಿ ಶಾಲಿನಿ ಡಾ.ಜಿ.ಶಂಕರ್ ಸಭಾಂಗಣದಲ್ಲಿ ನಡೆಯಲಿದೆ. 

ಆಕರ್ಷಕವಾಗಿ ನಿರ್ಮಿಸಿದ ಮಂಟಪದಲ್ಲಿ ನವದುರ್ಗೆಯರು ಹಾಗೂ ಶ್ರೀಶಾರದಾ ಮಾತೆಯ ವಿಗ್ರಹಗಳನ್ನು ಪ್ರತಿಷ್ಠಾಪಿಸಿ 10 ದಿನಗಳ ಕಾಲ ಶಾಸ್ರೋಕ್ತವಾಗಿ ಪೂಜಿಸಲಾಗುವುದು ಎಂದು ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ.ಜಿ.ಶಂಕರ್ ಹೇಳಿದರು.

ಉಚ್ಚಿಲ ದೇವಳದ ಮೊಗವೀರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಉತ್ಸವದ ಸಮಗ್ರ ಮಾಹಿತಿನೀಡಿದರು.

ವಿದ್ಯುದ್ದೀಪಾಲಂಕಾರ: ಅ.2ರಂದು ಸಂಜೆ 6.30 ಗಂಟೆಗೆ ಪಡುಬಿದ್ರಿಯಿಂದ ಕಾಪು ಸಮುದ್ರ ತೀರದ ದೀಪ ಸ್ತಂಭದ ವರೆಗೆ ಎಂಆರ್‌ಜಿ ಗ್ರೂಪ್‌ನ ಅಧ್ಯಕ್ಷ ಡಾ. ಕೆ. ಪ್ರಕಾಶ್ ಶೆಟ್ಟಿ ಪ್ರಾಯೋಜಕತ್ವದ ವಿದ್ಯುದ್ದೀಪಾಲಂಕಾರದ ಉದ್ಘಾಟನೆ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ.

ವಿಗ್ರಹಗಳ ಪ್ರತಿಷ್ಠಾಪನೆ: ಅ.3ರಂದು ಬೆಳಗ್ಗೆ 9ಕ್ಕೆ ನವದುರ್ಗೆಯರ ಮತ್ತು ಶಾರದಾ ಮಾತೆಯ ವಿಗ್ರಹಗಳನ್ನು ಕ್ಷೇತ್ರದ ತಂತ್ರಿಗಳಾದ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ ಹಾಗೂ ಪ್ರಧಾನ ಪುರೋಹಿತರಾದ ರಾಘವೇಂದ್ರ ಉಪಾಧ್ಯಾಯರ ನೇತೃತ್ವದಲ್ಲಿ ಪ್ರತಿಷ್ಠಾಪಿಸಲಾಗುವುದು.

ಉಡುಪಿ ಉಚ್ಚಿಲ ದಸರಾ-2024 ಉದ್ಘಾಟನೆ: ಅ.3ರ ಬೆಳಗ್ಗೆ 10 ಗಂಟೆಗೆ ಉಡುಪಿ ಉಚ್ಚಿಲ ದಸರಾ -2024ರ ಉದ್ಘಾಟನೆಯೂ ಗಣ್ಯರು, ದಾನಿಗಳು ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ನೆರವೇರಲಿದೆ.

ನಾನಾ ಮೇಳ, ವಸ್ತುಪ್ರದರ್ಶನಗಳ ಉದ್ಘಾಟನೆ: ಅ.3ರ ಬೆಳಗ್ಗೆ 10.30ಕ್ಕೆ ದಸರಾ ಮಹೋತ್ಸವ ಪ್ರಯುಕ್ತ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನ, ಗುಡಿಕೈಗಾರಿಕಾ ಪ್ರಾತ್ಯಕ್ಷಿಕೆ, ಸಮುದ್ರದ ಜೀವಂತ ಮೀನುಗಳ ಪ್ರದರ್ಶನ, ಕೇಂದ್ರ ಮತ್ತು ರಾಜ್ಯ ಸರಕಾರಗಳಲ್ಲಿ ಲಭ್ಯವಿರುವ ಮೀನುಗಾರಿಕೆ ಯೋಜನೆಗಳ ಮಾಹಿತಿ ಮತ್ತು ಮೀನುಗಾರಿಕಾ ಪರಿಕರಗಳ ಪ್ರದರ್ಶನ ಸೇರಿದಂತೆ ನಾನಾ ಪ್ರದರ್ಶನಗಳ ಉದ್ಘಾಟನೆ ನಡೆಯಲಿದೆ. ದ.ಕ. ಮೊಗವೀರ ಮಹಾಜನ ಸಂಘದ 100ನೇ ವರ್ಷದ ಸವಿನೆನಪಿಗೆ ನವೀಕರಿಸಲ್ಪಟ್ಟ ನೂತನ ಆಡಳಿತ ಕಚೇರಿಯ ಶುಭಾರಂಭ ಮಾಡಲಾಗುವುದು.

ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ: ಅ.3ರಂದು ಸಂಜೆ 5 ಗಂಟೆಗೆ ದಸರಾ ಉತ್ಸವದ ಪ್ರಯುಕ್ತ 10 ದಿನಗಳ ವರೆಗೂ ನಡೆಯುವ ನಾನಾ ಸಾಂಸ್ಕೃತಿಕ ಕಾರ್ಯಕ್ರಮ, ಭಜನಾ ಕಾರ್ಯಕ್ರಮ, ಧಾರ್ಮಿಕ ಸಭಾಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ.

ಧಾರ್ಮಿಕ ಕಾರ್ಯಕ್ರಮಗಳು: ಪ್ರತೀದಿನ ಬೆಳಗ್ಗೆ 9ರಿಂದ 12ರವರೆಗೆ ಚಂಡಿಕಾಹೋಮ, ಮಧ್ಯಾಹ್ನ 12 ರಿಂದ 3ರವರೆಗೆ ಅನ್ನಸಂತರ್ಪಣೆ, ರಾತ್ರಿ 7ರಿಂದ ಭಕ್ತರಿಗೆ ಲಘು ಉಪಾಹಾರ, ಸಂಜೆ 5.45ರಿಂದ 6.15 ರವರೆಗೆ ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ಪ್ರತೀದಿನ ಬೆಳಗ್ಗೆ 9.30ರಿಂದ ಭಜನಾ ಕಾರ್ಯಕ್ರಮ, ಪ್ರತಿದಿನ ಸಂಜೆ 5ರಿಂದ 5.45ರವರೆಗೆ ಧಾರ್ಮಿಕ ಸಭಾ ಕಾರ್ಯಕ್ರಮ, ಪ್ರತೀದಿನ ರಾತ್ರಿ 8.30ರಿಂದ ಕಲೋಕ್ತ ಪೂಜೆ ನಡೆಯಲಿದೆ. ಅ.12ರ ವಿಜಯ ದಶಮಿಯಂದು ಸಾಮೂಹಿಕ ಮಹಾಚಂಡಿಕಾಯಾಗ ಹಾಗೂ ಮಹಾ ಪೂರ್ಣಾಹುತಿ ನಡೆಯಲಿದೆ. ಪ್ರತಿದಿನ ಸಂಜೆ 8 ರಿಂದ 8.10ರ ತನಕ ದಸರಾ ಮಹೋತ್ಸವದ ಮಹತ್ವದ ಬಗ್ಗೆ ವಿಶೇಷ ಲೇಸರ್ ಶೋ ಹಮ್ಮಿಕೊಳ್ಳಲಾಗಿದೆ. ಅ.12 ರ ಮಧ್ಯಾಹ್ನ 2.30ಕ್ಕೆ ವಿಸರ್ಜನಾ ಪೂಜೆ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ್ ಎಸ್. ಸುವರ್ಣ, ದಸರಾ ಉತ್ಸವ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಮಹಾಜನ ಸಂಘದ ಉಪಾಧ್ಯಕ್ಷ ಮೋಹನ್ ಬೇಂದ್ರೆ, ಪ್ರಧಾನ ಕಾರ್ಯದರ್ಶಿ ಶರಣ್‌ ಕುಮಾರ್ ಮಟ್ಟು, ಕೋಶಾಧಿಕಾರಿ ರತ್ನಾಕರಸಾಲ್ಯಾನ್, ಜತೆಕಾರ್ಯದರ್ಶಿ ಸುಜಿತ್ ಎಸ್. ಸಾಲ್ಯಾನ್, ಸತೀಶ್ ಅಮೀನ್ ಪಡುಕರೆ ಉಪಸ್ಥಿತರಿದ್ದರು.

12ರಂದು ಸಂಜೆ ವಿಜೃಂಭಣೆಯ ಶೋಭಾಯಾತ್ರೆ

ಅ.12ರಂದು ಶ್ರೀಕ್ಷೇತ್ರದಿಂದ ಸಂಜೆ 4ಕ್ಕೆ ಶೋಭಾಯಾತ್ರೆ ಟ್ಯಾಬೋ, ಭಜನಾ ತಂಡಗಳ ಸಹಿತ ಹೊರಟು ಎರ್ಮಾಳ್ ತನಕ ರಾಷ್ಟ್ರೀಯ ಹೆದ್ದಾರಿ- 66 ರಲ್ಲಿ ಸಾಗಿ ಅಲ್ಲಿಂದ ತಿರುಗಿ ರಾಷ್ಟ್ರೀಯ ಹೆದ್ದಾರಿ ಮೂಲಕ ಉಚ್ಚಿಲ-ಮೂಳೂರು, ಕೊಪ್ಪಲಂಗಡಿಯವ ರೆಗೆ ಸಾಗಿ ಅಲ್ಲಿಂದ ಕಾಪು ಸಮುದ್ರ ತೀರದ ದೀಪಸ್ತಂಭ ಬಳಿ ವಿಸರ್ಜನೆ ಮಾಡಲಾಗುವುದು. ಈ ಸಂದರ್ಭ ಬೋಟುಗಳಿಂದ ಸಮುದ್ರ ಮಧ್ಯೆ ಭವ್ಯವಾದ ವಿದ್ಯುದ್ದೀಪಾಲಂಕಾರ, ಆಕರ್ಷಕ ಸುಡುಮದ್ದು ಪ್ರದರ್ಶನ ಹಾಗೂ ನವದುರ್ಗೆಯರಿಗೆ, ಶಾರದಾ ಮಾತೆ ಹಾಗೂ ಅಂಬಾರಿ ಹೊತ್ತ ಆನೆಗೆ ಡೋನ್ ಮೂಲಕ ಪುಷ್ಪಾರ್ಚನೆ ಮಾಡಲಾಗುತ್ತದೆ. ಸುಮಂಗಲೆಯವರಿಂದ ಸಾಮೂಹಿಕ ಮಂಗಳಾರತಿ, ಅರ್ಚಕರಿಂದ ನವದುರ್ಗೆಯರು, ಶಾರದಾ ಮಾತೆ ಹಾಗೂ ಸಮುದ್ರ ರಾಜನಿಗೆ ಗಂಗಾರತಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!