ಡಾ.ಸುಶಿಲ್ ಜತ್ತನ್ನಗೆ ಮೈಲ್‌ಸ್ಟೋನ್ ಗ್ಲೋಬಲ್- IHW ಗ್ಲೋಬಲ್ ಲೀಡರ್ಸ್ ಪ್ರಶಸ್ತಿ ಪ್ರದಾನ
ಉಡುಪಿ: ಉಡುಪಿಯ ಸಿಎಸ್‌ಐ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆಯ ನಿರ್ದೇಶಕ ಡಾ.ಸುಶಿಲ್ ಜತನ್ನಾ ಅವರಿಗೆ ಆರೋಗ್ಯ ಸೇವೆಗೆ ನೀಡಿದ ಅತ್ಯುತ್ತಮ ಕೊಡುಗೆಗಳಿಗಾಗಿ ಮೈಲ್‌ಸ್ಟೋನ್ ಗ್ಲೋಬಲ್ ಪ್ರಶಸ್ತಿ ಮತ್ತು ಐಎಚ್‌ಡಬ್ಲ್ಯೂ ಗ್ಲೋಬಲ್ ಲೀಡರ್ಸ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ)ನ ಅಜ್ಮಾನ್‌ನ ಬಾಹಿ ಅಜ್ಮಾನ್ ಪ್ಯಾಲೇಸ್ ಹೋಟೆಲ್‌ನಲ್ಲಿ ಸೆ.14ರಂದು ನಡೆದ ಸಮಾರಂಭದಲ್ಲಿ ಮೈಲ್‌ಸ್ಟೋನ್ ಗ್ಲೋಬಲ್ ಅವಾರ್ಡ್ಸ್ ಮತ್ತು ಕಾನ್‌ಕ್ಲೇವ್-2024 ಸಮಾರಂಭದಲ್ಲಿ ಡಾ.ಜತನ್ನಾ ಅವರಿಗೆ ಮೈಲ್‌ಸ್ಟೋನ್ ಗ್ಲೋಬಲ್ ಪ್ರಶಸ್ತಿ ಜೊತೆಗೆ ಅವರ ಆಸ್ಪತ್ರೆಗೆ ಚಿನ್ನದ ಪದಕ ಮತ್ತು ಶ್ರೇಷ್ಠತೆಯ ಪ್ರಮಾಣಪತ್ರವನ್ನು ನೀಡಲಾಯಿತು. ಪ್ರಶಸ್ತಿಯನ್ನು ಎಮಿರಾಟಿ ಉದ್ಯಮಿ ಮತ್ತು ಲೋಕೋಪಕಾರಿ ಡಾ. ಅಬ್ದುಲ್ಲಾ ಹಸ್ತಾಂತರಿಸಿದರು.
ಸೆ.21ರಂದು ದುಬೈನ ಹಯಾಟ್ ರೀಜೆನ್ಸಿ ಹೊಟೇಲ್‌ನಲ್ಲಿ ನಡೆದ 10ನೇ ಸಮಗ್ರ ಆರೋಗ್ಯ ಮತ್ತು ಯೋಗಕ್ಷೇಮ(ಐಎಚ್‌ಡಬ್ಲ್ಯೂ) ಶೃಂಗಸಭೆಯಲ್ಲಿ ಡಾ.ಜತನ್ನಾ ಅವರು ಐಎಚ್‌ಡಬ್ಲ್ಯೂ ಗ್ಲೋಬಲ್ ಲೀಡರ್ಸ್ ಪ್ರಶಸ್ತಿಯನ್ನು ಪಡೆದರು. ಇದನ್ನು ಮಾಜಿ ಕೇಂದ್ರ ಆರೋಗ್ಯ ಮತ್ತು ಪರಿಸರ ಸಚಿವ ಡಾ.ಹರ್ಷವರ್ಧನ್ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಪ್ರಸ್ತುತ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ, ಗಾಯಕಿ ಮತ್ತು ಸಾಮಾಜಿಕ ಕಾರ್ಯಕರ್ತೆ ಅಮೃತಾ ಫಡ್ನವಿಸ್ ಪ್ರದಾನ ಮಾಡಿದರು.
1923ರಲ್ಲಿ ಸ್ವಿಸ್ ಮಿಷನರಿ ಡಾ.ಇವಾ ಲೊಂಬಾರ್ಡ್ ಸ್ಥಾಪಿಸಿದ ಕರಾವಳಿ ಪ್ರದೇಶದ ಅತ್ಯಂತ ಹಳೆಯ ಆಸ್ಪತ್ರೆಗಳಲ್ಲಿ ಒಂದಾದ ಲೊಂಬಾರ್ಡ್ ಸ್ಮಾರಕ ಆಸ್ಪತ್ರೆಯನ್ನು ಡಾ.ಜತ್ತನ್ನ ಪುನರುಜ್ಜಿವನಗೊಳಿಸುವ ಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇಂದು ಈ ಆಸ್ಪತ್ರೆಯು 150-ಹಾಸಿಗೆಯ ಮಲ್ಟಿಸ್ಪೆಷಾಲಿಟಿ ಸೌಲಭ್ಯದೊಂದಿಗೆ ಉತ್ತಮ-ಗುಣಮಟ್ಟದ ಆರೈಕೆಯನ್ನು ನೀಡುವ ಸಂಸ್ಥೆಯಾಗಿ ಬೆಳೆದು ನಿಂತಿದೆ.
ಮಂಗಳೂರಿನಲ್ಲಿ ಹುಟ್ಟಿದ ಡಾ.ಜತನ್ನ, 1982ರಲ್ಲಿ ನಗರದ ಕೆಎಂಸಿಯಲ್ಲಿ ಎಂಬಿಬಿಎಸ್ ಮುಗಿಸಿ ವಿದೇಶದಲ್ಲಿ ಇಂಟರ್ನಲ್ ಮೆಡಿಸಿನ್, ಪಬ್ಲಿಕ್ ಹೆಲ್ತ್ ಮೆಡಿಸಿನ್, ಹೆಲ್ತ್ ಪಾಲಿಸಿ ಮತ್ತು ಮ್ಯಾನೇಜ್ಮೆಂಟ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರು ಇಂಗ್ಲೆಂಡಿನಲ್ಲಿ ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ ಕ್ಷೇತ್ರಗಳಲ್ಲಿ 32 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಅಪಾರ ಅನುಭವವನ್ನು ಹೊಂದಿದ್ದಾರೆ. ಅವರು ಕೇಂಬ್ರಿಡ್ಜ್‌ನಲ್ಲಿ ರಾಷ್ಟ್ರೀಯ ಆರೋಗ್ಯ ಸೇವೆಯ(ಎನ್ಎಚ್ಎಸ್ನ) ಮುಖ್ಯಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಮೊದಲ ಭಾರತೀಯರಾಗಿದ್ದಾರೆ. ಅದಕ್ಕೂ ಮೊದಲು ಕೇರ್ ಯುಕೆ ಪಿಎಲ್ಸಿಯ ಹೆಲ್ತ್ ಕೇರ್ ವಿಭಾಗದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.
ಡಾ.ಜತನ್ನ, ಅಸೋಸಿಯೇಶನ್ ಆಫ್ ಹೆಳ್ವೆಕೇರ್ ಪ್ರೊವೈಡರ್ಸ್ ಆಫ್ ಇಂಡಿಯಾದ ಕರ್ನಾಟಕ ಅಧ್ಯಾಯದ ಅಧ್ಯಕ್ಷರಾಗಿ ಮತ್ತು ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಆಸ್ಪತ್ರೆ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಅವರು ಕ್ರಿಶ್ಚಿಯನ್ ಮೆಡಿಕಲ್ ಅಸೋಸಿಯೇಷನ್ ಆಫ್ ಇಂಡಿಯಾದ ಟ್ರಸ್ಟಿ ಮತ್ತು ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.