ಉಡುಪಿ: ಮಂಗಳವಾರ ಬದಲು ರವಿವಾರ ಸಲೂನ್ ಬಂದ್
ಉಡುಪಿ: ಜಿಲ್ಲೆಯಲ್ಲಿ ಕೊರೋನ ಪಾಸಿಟಿವ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತು ರವಿವಾರ ಸೆಲೂನು ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಇರುವುದರಿಂದ ಮುಂದಿನ ದಿನಗಳಲ್ಲಿ ಮಂಗಳವಾರ ಬದಲು ರವಿವಾರ ಸಲೂನ್ ಗಳನ್ನು ಬಂದ್ ಮಾಡಲು ಉಡುಪಿ ಜಿಲ್ಲಾ ಸವಿತಾ ಸಮಾಜ ನಿರ್ಧರಿಸಿದೆ.
ಮಂಗಳವಾರ ಜಿಲ್ಲಾ ಪದಾಧಿಕಾರಿಗಳು ಮತ್ತು ಏಳು ತಾಲ್ಲೂಕು ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ರವಿವಾರ ಗ್ರಾಹಕರ ಸಂಖ್ಯೆ ಹೆಚ್ಚು ಇರುವುದರಿಂದ ಸುರಕ್ಷಿತ ಅಂತರ ಕಾಪಾಡಿ ಕೊಳ್ಳಲು ಮತ್ತು ವೃತ್ತಿ ನಿರತರಿಗೆ ನಿಯಮಾವಳಿಗಳನ್ನು ಪಾಲಿಸಲು ಕಷ್ಟ ಸಾಧ್ಯವಾಗುತ್ತದೆ ಎಂದು ಸವಿತಾ ಸಮಾಜ ತಿಳಿಸಿದೆ.
ಈ ಎಲ್ಲ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಈಗ ಮಾತ್ರವಲ್ಲದೆ, ಮುಂದಿನ ದಿನಗಳಲ್ಲಿಯೂ ಕೂಡ ಕಡ್ಡಾಯವಾಗಿ ಸೆಲೂನುಗಳನ್ನು ರವಿವಾರ ಬಂದ್ ಮಾಡಿ, ಮಂಗಳವಾರ ತೆರೆಯಲು ತೀರ್ಮಾನಿಸಲಾಗಿದೆ ಎಂದು ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಭಾಸ್ಕರ್ ಭಂಡಾರಿ ಗುಡ್ಡೆಯಂಗಡಿ, ಪ್ರಧಾನ ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲು, ಕೋಶಾಧಿಕಾರಿ ಶೇಖರ್ ಸಾಲಿಯಾನ್, ರಾಜ್ಯ ಪ್ರತಿನಿಧಿ ವಿಶ್ವನಾಥ್ ಭಂಡಾರಿ ನಿಂಜೂರು, ಗೌರವಾಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ, ಸವಿತಾ ಸಹಕಾರಿಯ ಅಧ್ಯಕ್ಷ ನವೀನ್‌ಚಂದ್ರ ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.