ಸಿಎಂ ಪತ್ನಿಯೇ ಫಲಾನುಭವಿಯಾದ್ದರಿಂದ ತನಿಖೆ ಅಗತ್ಯವಿದೆ: ಹೈಕೋರ್ಟ್ ತೀರ್ಪಿನ ಸಂಪೂರ್ಣ ಮಾಹಿತಿ…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಯೇ ಫಲಾನುಭವಿಯಾಗಿರುವ ಮುಡಾ ನಿವೇಶನ ಹಂಚಿಕೆ ಹಗರಣದ ತನಿಖೆಯ ಅಗತ್ಯವನ್ನು ಕರ್ನಾಟಕ ಹೈಕೋರ್ಟ್ ಸ್ಪಷ್ಟವಾಗಿ ಹೇಳಿದ್ದು, ಅರ್ಜಿದಾರರು ಅಧಿಕಾರದ ಸ್ಥಾನದಲ್ಲಿಲ್ಲದಿದ್ದರೆ ಅಂತಹ ಪ್ರಯೋಜನ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದೆ.
ತಮ್ಮ ವಿರುದ್ಧ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ತೀರ್ಪು ಕಾಯ್ದಿರಿಸಿದ್ದರು. ಮಂಗಳವಾರ ಸಿಎಂ ಸಿದ್ದರಾಮಯ್ಯ ಅವರ ಅರ್ಜಿಯನ್ನು ವಜಾಗೊಳಿಸಿ ತೀರ್ಪು ನೀಡಿದ್ದು, ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17 ಎ ಅಡಿ ರಾಜ್ಯಪಾಲರು ನೀಡಿರುವ ಅನುಮತಿಯನ್ನು ಎತ್ತಿಹಿಡಿದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆ ಏಕೆ ಅಗತ್ಯ ಇದೆ ಎಂಬುದಕ್ಕೆ ಹೈಕೋರ್ಟ್ ಸ್ಪಷ್ಟ ಕಾರಣಗಳನ್ನು ನೀಡಿದ್ದು, ರಾಜ್ಯಪಾಲರ ಆದೇಶ ಏಕೆ ಸರಿಯಾಗಿದೆ ಎಂಬುದಕ್ಕೂ ವಿವರಣೆಯನ್ನು ನೀಡಿದೆ.
ಅರ್ಜಿದಾರರು ಅಧಿಕಾರದ ಚುಕ್ಕಾಣಿಯಲ್ಲಿ ಇಲ್ಲದಿದ್ದಲ್ಲಿ, ನ್ಯಾಯವಲ್ಲದ ಲಾಭ ಪಡೆದ ಕಾರಣಕ್ಕಾಗಿ ಕನಿಷ್ಠ ತನಿಖೆಯ ಅಗತ್ಯವಿರುತ್ತದೆ. ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7 ಸಿ ಅಡಿ ಸಿದ್ದರಾಮಯ್ಯ ವಿರುದ್ಧ ಆರೋಪವಿದೆ. ಈ ಸೆಕ್ಷನ್ ಅಡಿ ಸಾರ್ವಜನಿಕ ಸೇವಕನಾದವನು ತನಗಾಗಲೀ ಅಥವಾ ಇತರರಿಗಾಗಲೀ ತನ್ನ ಅಧಿಕಾರ ದುರುಪಯೋಗ ಪಡಿಸಿಕೊಂಡು ನ್ಯಾಯವಲ್ಲದ ಲಾಭ ಪಡೆದರೆ ಅದು ಅಪರಾಧವಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ.
ತಮಗೆ ಅನುಕೂಲವಾಗುವಂತೆ ಕಾಲಕಾಲಕ್ಕೆ ನಿಯಮಗಳನ್ನು ರೂಪಿಸಿ, ಜನಸಾಮಾನ್ಯರು ಇಷ್ಟು ತ್ವರಿತಗತಿಯಲ್ಲಿ ಈ ಸೌಲಭ್ಯಗಳನ್ನು ಪಡೆಯುವುದು ಹಿಂದೆಂದೂ ಕಂಡರಿಯದ ಸಂಗತಿಯಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮುಡಾ ಪ್ರಕರಣದ ವಾಸ್ತವಾಂಶಗಳನ್ನು ಗಮನಿಸಿದರೆ ಮೇಲ್ನೋಟಕ್ಕೆ ಸಿಎಂ ಸಿದ್ದರಾಮಯ್ಯ ಕುಟುಂಬ ನ್ಯಾಯವಲ್ಲದ ಲಾಭ ಪಡೆದಿರುವುದು ಸ್ಪಷ್ಟವಾಗಿದೆ. 40 ಕಿಲೋ ಮೀಟರ್ ದೂರದ ಜಮೀನು ಬಿಟ್ಟುಕೊಟ್ಟು ಅದರ ಬದಲಿಗೆ ಮೈಸೂರಿನ ಹೃದಯ ಭಾಗದ ನಿವೇಶನಗಳನ್ನು ಪಡೆದಿದ್ದಾರೆ. ಸಾರ್ವಜನಿಕ ಸೇವಕ ತನ್ನ ಕುಟುಂಬದವರಿಗಾಗಿ ಪ್ರಭಾವ ಬಳಸಿರುವುದಕ್ಕೆ ಇದು ಸಾಕು. ಪ್ರಭಾವ ಬಳಸಲು ಸಾರ್ವಜನಿಕ ಸೇವಕ ಯಾವುದೇ ಶಿಫಾರಸು ಅಥವಾ ಆದೇಶ ಮಾಡಬೇಕಿಲ್ಲ. ಪತ್ನಿಗೆ ಲಾಭವಾಗುವುದರ ಹಿಂದೆ ನಿಸ್ಸಂದೇಹವಾಗಿ ಸಿದ್ದರಾಮಯ್ಯ ಇದ್ದಾರೆ. ಸಿದ್ದರಾಮಯ್ಯ ಅವರಿಗಿರುವ ಅಧಿಕಾರದ ಬಲದಿಂದಲೇ ಅವರ ಕುಟುಂಬ ಅನುಕೂಲ ಪಡೆದಿದೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.
ಸಿಎಂ ಪುತ್ರ ಭಾಗಿಯಾಗಿದ್ದ ಸಭೆಯಲ್ಲಿ 50 50 ನಿವೇಶನ ಹಂಚಿಕೆ ತೀರ್ಮಾನವಾಗಿದೆ. 50-50 ಹಂಚಿಕೆ ಕಾನೂನುಬಾಹಿರವೆಂದು ರದ್ದಾಗಿದ್ದರೆ ಸಿಎಂ ಪತ್ನಿಗೆ ದೊರಕಿದ 14 ನಿವೇಶನಗಳಿಗೆ ಏನಾಗಲಿದೆ ಎಂಬ ಬಗ್ಗೆ ತನಿಖೆಯಾಗಬೇಕಿದೆ. ಸಾಮಾನ್ಯ ನಾಗರಿಕನಾಗಿದ್ದರೆ ತನಿಖೆಗೆ ನಾಚುತ್ತಿರಲಿಲ್ಲ. ಮುಖ್ಯಮಂತ್ರಿ ದಿನಗೂಲಿಯವರು, ಜನಸಾಮಾನ್ಯರ ನಾಯಕನಾಗಿ ತನಿಖೆಗೆ ಹಿಂಜರಿಯಬಾರದು. ಸಿದ್ದರಾಮಯ್ಯ ಕುಟುಂಬದ ವಿರುದ್ಧ 56 ಕೋಟಿಯ ಅಕ್ರಮ ಲಾಭ ಪಡೆದ ಆರೋಪ, ಅನುಮಾನಗಳಿರುವಾಗ ತನಿಖೆ ಅತ್ಯಗತ್ಯವೆಂದು ಭಾವಿಸುತ್ತೇನೆ. ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ.