ಕೇಂದ್ರ ಬಿಜೆಪಿ ಸರಕಾರದ ಸಂವಿಧಾನ ವಿರೋಧಿ ಧೋರಣೆ ಖಂಡನೀಯ- ಕಾಂಗ್ರೆಸ್
ಉಡುಪಿ: ಚುನಾಯಿತ ಸರ್ಕಾರವನ್ನು ಹೇಗಾದರೂ ಮಾಡಿ ಬೀಳಿಸಿ, ಬಿಜೆಪಿ ಸರ್ಕಾರವನ್ನು ತರಲು ಪ್ರಯತ್ನಿಸುತ್ತಿರುವ ಬಿಜೆಪಿಯು ತನ್ನಿಂದ ಆಯ್ಕೆಯಾದ ರಾಜ್ಯಪಾಲರ ಮುಖಾಂತರ ಜನರಿಂದ ಆಯ್ಕೆಯಾದ ಸರಕಾರವನ್ನು ಬೀಳಿಸುವ ಷಡ್ಯಂತ್ರ ರೂಪಿಸುತ್ತಿದೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷಗಳಲ್ಲಿ ಐಟಿˌ ಇಡಿ, ಸಿಬಿಐ ಬಳಸಿ 443 ವಿರೋಧ ಪಕ್ಷದ ಶಾಸಕರನ್ನು ತನ್ನ ಪಕ್ಷಕ್ಕೆ ಸೇರಿಸಿಕೊಂಡಿದೆ. ಹಲವಾರು ಭ್ರಷ್ಟಾಚಾರ ಪ್ರಕರಣಗಳಿಂದ ಬೇಸತ್ತ ರಾಜ್ಯದ ಜನತೆ ಕಳೆದ ಚುನಾವಣೆಯಲ್ಲಿ ಬಿಜೆಪಿಯ ನ್ನು ಮನೆಗೆ ಕಳುಹಿಸಿದ್ದರು. ಚುನಾವಣೆಯಲ್ಲಿ ರಾಜ್ಯದ ಜನರನ್ನು ಎದುರಿಸಲಾಗದೆ ಮತ್ತು ಕಾಂಗ್ರೆಸ್ ಪಕ್ಷದ ಜನಪ್ರಿಯತೆಯನ್ನು ಸಹಿಸದೆ ಬಿಜೆಪಿಯು ದ್ವೇಷದ ರಾಜಕೀಯ ಮಾಡುತ್ತಿದೆ. ರಾಜ್ಯಪಾಲರು ಒಂದು ಅರ್ಜಿಯನ್ನು ಪಡೆಯುವಾಗ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು.
ಆದರೆ, ರಾಜ್ಯಪಾಲರು ತಮ್ಮ ದೆಹಲಿಯ ನಾಯಕರು ಹೇಳುವ ಮಾತನ್ನು ಕೇಳಿ ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತಂದುಕೊಂಡರು,ರಾಜ್ಯಪಾಲರ ಕ್ರಮ ಪ್ರಜಾಪ್ರಭುತ್ವದ ಕಗ್ಗೊಲೆ. ಇಂದು ಕರ್ನಾಟಕ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಕರಾಳ ದಿನವಾಗಿದೆ. ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ಇರುವ ಸಿದ್ದರಾಮಯ್ಯರನ್ನ ತುಳಿಯುವ ಪ್ರಯತ್ನ ಬಿಜೆಪಿಯಿಂದ ನಡೆಯುತ್ತಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ರಾಜ್ಯಪಾಲರ ಪ್ರಾಸಿಕ್ಯೂಷನ್ ಆದೇಶವನ್ನು ಎತ್ತಿ ಹಿಡಿದ ಹೈಕೋರ್ಟ್ ಆದೇಶಕ್ಕೆ ಪ್ರತಿಕ್ರಿಯಿಸಿದ್ದಾರೆˌ.