ಮಕ್ಕಳ ಅಶ್ಲೀಲ ಚಿತ್ರ ಡೌನ್ ಲೋಡ್ ಮಾಡುವುದು, ವೀಕ್ಷಿಸುವುದು ಪೋಕ್ಸೋ ಕಾಯ್ದೆ ಮತ್ತು ಐಟಿ ನಿಯಮದಡಿ ಅಪರಾಧ: ಸುಪ್ರೀಂ ಕೋರ್ಟ್
ನವದೆಹಲಿ: ಮಕ್ಕಳ ಅಶ್ಲೀಲ ಚಿತ್ರಗಳನ್ನು ಡೌನ್ ಲೋಡ್ ಮಾಡಿಕೊಂಡು ನೋಡುವುದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ಐಟಿ ನಿಯಮದಡಿ ಅಪರಾಧವಾಗಿದೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ತಡೆಯುವ ಕಠಿಣ ಕಾನೂನು ಕುರಿತು ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ.
ಮಕ್ಕಳ ಅಶ್ಲೀಲ ಚಿತ್ರಗಳನ್ನು ಡೌನ್‌ಲೋಡ್ ಮಾಡುವುದು ಮತ್ತು ವೀಕ್ಷಿಸುವುದು ಪೋಕ್ಸೊ ಕಾಯ್ದೆಯಡಿ ಅಪರಾಧವಲ್ಲ ಎಂದು ತೀರ್ಪು ನೀಡಿದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಅವರ ನೇತೃತ್ವದ ನ್ಯಾಯಪೀಠವು ತಳ್ಳಿಹಾಕಿದೆ. ತೀರ್ಪು ನೀಡುವಲ್ಲಿ ಮದ್ರಸ್ ಉಚ್ಚ ನ್ಯಾಯಾಲಯವು “ಘೋರ ದೋಷ” ಎಸಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
28ವರ್ಷದ ಯುವಕನೊಬ್ಬ ತನ್ನ ಫೋನ್‌ನಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳನ್ನು ಡೌನ್‌ಲೋಡ್ ಮಾಡಿದ ಆರೋಪಕ್ಕೆ ಸಂಬಂಧಪಟ್ಟಂತೆ ಇತ್ತೀಚೆಗೆ ಮದ್ರಾಸ್ ಹೈಕೋರ್ಟ್ ಆದೇಶ ನೀಡಿತ್ತು. ನ್ಯಾಯಾಲಯವು ವ್ಯಕ್ತಿಯ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಿತ್ತು.
ಇತ್ತೀಚಿನ ದಿನಗಳಲ್ಲಿ ಮಕ್ಕಳು ಅಶ್ಲೀಲತೆ ಚಿತ್ರಗಳನ್ನು ಮೊಬೈಲ್, ಕಂಪ್ಯೂಟರ್ ನಲ್ಲಿ ಡೌನ್ ಲೋಡ್ ಮಾಡಿಕೊಂಡು ನೋಡುವ ಗಂಭೀರ ಸಮಸ್ಯೆ ಹೊಂದಿದ್ದಾರೆ. ಸಮಾಜವು ಅವರನ್ನು ಶಿಕ್ಷಿಸುವ ಬದಲು ಅವರಿಗೆ ಶಿಕ್ಷಣ ನೀಡುವಷ್ಟು ಪ್ರಬುದ್ಧವಾಗಿರಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ವ್ಯಕ್ತಿಯ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ಸುಪ್ರೀಂ ಕೋರ್ಟ್ ಇಂದು ಮರುಸ್ಥಾಪಿಸಿದೆ.