ಉಡುಪಿ: ಸೆ.24- ಕಸ್ತೂರಿ ರಂಗನ್ ವರದಿಯಿಂದ ಜನವಸತಿ ಪ್ರದೇಶ ಕೈಬಿಡುವಂತೆ ಆಗ್ರಹಿಸಿ ಧರಣಿ
ಉಡುಪಿ, ಸೆ.23: ಕಸ್ತೂರಿ ರಂಗನ್ ವರದಿಯಿಂದ ಜನವಸತಿ ಪ್ರದೇಶಗಳನ್ನು ಕೈಬಿಡುವಂತೆ ಆಗ್ರಹಿಸಿ ಬೈಂದೂರು ತಾಲೂಕಿನ ಜಡ್ಕಲ್ ಮುದೂರು ಗ್ರಾಮ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಸ್ಥಳೀಯ ಗ್ರಾಮಸ್ಥರು ಸೆ.24ರಂದು ಬೆಳಗ್ಗೆ 10ಗಂಟೆಗೆ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಿದ್ದಾರೆ ಎಂದು ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ವಾಸುದೇವ ಮುದೂರು ತಿಳಿಸಿದ್ದಾರೆ.
ಉಡುಪಿಯ ಡಯಾನ ಹೋಟೆಲ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರ ಬದುಕು ಕಸಿಯುವ ಜನ ವಿರೋಧಿ ನಿಲುವಿ ನಿಂದ ಕೂಡಿದ ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿಯಿಂದಾಗಿ ಜನವಸತಿ ಪ್ರದೇಶಗಳು ಪರಿಸರ ಅತೀ ಸೂಕ್ಷ್ಮ ಅರಣ್ಯ ವ್ಯಾಪ್ತಿಗೆ ಒಳಪಡುವುದರಿಂದ ಜನರಲ್ಲಿ ಆತಂಕ ಉಂಟಾಗಿದೆ. ಜಿಲ್ಲೆಯ ಸುಮಾರು 37ಕ್ಕೂ ಅಧಿಕ ಗ್ರಾಮಗಳು ಈ ವರದಿಯ ಅತೀ ಸೂಕ್ಷ್ಮ ವಲಯದ ವ್ಯಾಪ್ತಿಗೆ ಒಳಪಡುತ್ತದೆ ಎಂದರು.
ಈ ಹಿನ್ನೆಲೆಯಲ್ಲಿ ಜಡ್ಕಲ್ ಗ್ರಾಪಂನಲ್ಲಿ ಸೆ.19ರಂದು ಈ ವರದಿಯಿಂದ ಜನಜೀವನದ ಮೇಲೆ ಉಂಟಾಗುತ್ತಿರುವ ಪರಿಣಾಮದ ಗಂಭೀರತೆಯ ಸಾಧಕ ಬಾಧಕಗಳನ್ನು ಚರ್ಚಿಸಲು ವಿಶೇಷ ಗ್ರಾಮಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ಪರಿಣಿತ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿಯನ್ನು ಪಡೆದು ಗ್ರಾಮ ಸಭೆಯ ನಿರ್ಣಯದಂತೆ ಈ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಈ ಧರಣಿಯಲ್ಲಿ ಪರಿಸರವಾದಿ ಕಲ್ಕುಳಿ ವಿಠಲ ಹೆಗಡೆ, ಜನಪರ ಹೋರಾಟಗಾರ ಜಯನ್ ಮಲ್ಪೆ ಸೇರಿದಂತೆ ಅನೇಕ ಪ್ರಗತಿಪರ ಚಿಂತಕರು, ಸಮಾನ ಮನಸ್ಕರು ಹಾಗೂ ಬಾಧಿತ ಗ್ರಾಮಗಳ ಗ್ರಾಮಸ್ಥರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮುದೂರು ಗ್ರಾಪಂ ಸದಸ್ಯ ಲಕ್ಷ್ಮಣ ಶೆಟ್ಟಿ, ಸಮಿತಿಯ ಪ್ರಮುಖರಾಜ ರಂಜಿತ್ ಎಂ.ವಿ.ಮುದೂರು, ಜಿ.ಬಿ.ಮೋಹನ್ ಜಡ್ಕಲ್, ಜೋಯ್ ವಿ.ಜೆ. ಉಪಸ್ಥಿತರಿದ್ದರು.