ಗಂಗೊಳ್ಳಿ: 21ಲಕ್ಷ ರೂ. ಮೌಲ್ಯದ ದೇವಸ್ಥಾನದ ಚಿನ್ನಾಭರಣ ಕಳವು- ಅರ್ಚಕನ ಬಂಧನ
ಗಂಗೊಳ್ಳಿ: ಇಲ್ಲಿನ ಶ್ರೀ ಮಹಾಂಕಾಳಿ ಅಮ್ಮನವರ ದೇವಸ್ಥಾನ ದೇವಿಗೆ ಹರಕೆ ರೂಪದಲ್ಲಿ ಅರ್ಪಿಸಿದ್ದ ಒಟ್ಟು 21 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಅರ್ಚಕನನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.
ಶಿರಸಿ ಸಾಲಕಣಿ ಗ್ರಾಮದ ಮೂರೆಗಾರ ಎಂಬಲ್ಲಿನ ನರಸಿಂಹ ಭಟ್ (43) ಬಂಧಿತ ಆರೋಪಿಯಾಗಿದ್ದು ಈತ ಗಂಗೊಳ್ಳಿ ಖಾರ್ವಿಕೇರಿ ಶ್ರೀ ಮಹಾಂಕಾಳಿ ದೇವಸ್ಥಾನದ ಅರ್ಚಕನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ವಿವರ: ಮಹಾಂಕಾಳಿ ದೇವಸ್ಥಾನದಲ್ಲಿ ದೇವಿಯ ಮೂರ್ತಿಗೆ ಆಡಳಿತ ಮಂಡಳಿ ಹಾಗೂ ಭಕ್ತಾದಿಗಳು ಸೇವೆ, ಹರಕೆ ರೂಪದಲ್ಲಿ ನೀಡಿದ ಚಿನ್ನಾಭರಣಗಳು ಅಲಂಕಾರ ಮಾಡಿದ ರೀತಿಯಲ್ಲಿ ಪ್ರತಿದಿನ ದೇವರ ಮೂರ್ತಿಯ ಮೈಮೇಲೆ ಇರುತ್ತಿತ್ತು. ಸೆ. 21ರಂದು ಸಂಜೆ 7 ಗಂಟೆ ಸುಮಾರಿಗೆ ದೇವಸ್ಥಾನದ ಗರ್ಭಗುಡಿಯಲ್ಲಿ ಪೂಜೆ ಮಾಡುತ್ತಿದ್ದ ಆರೋಪಿ ಅರ್ಚಕ ನರಸಿಂಹ ಭಟ್ ನಲ್ಲಿ ನವರಾತ್ರಿ ಉತ್ಸವದ ಸಲುವಾಗಿ ದೇವರ ಮೈಮೇಲಿದ್ದ ಚಿನ್ನಾಭರಣಗಳನ್ನು ಶುದ್ಧಾಚಾರ ಮಾಡಲು ನೀಡುವಂತೆ ಹೇಳಿ ಪಡೆಯಲಾಗಿತ್ತು. ಈ ವೇಳೆ ಆ ಆಭರಣಗಳ ವಿನ್ಯಾಸದಲ್ಲಿ ಬದಲಾವಣೆ ಹಾಗೂ ಅಸಲಿ ಚಿನ್ನದಂತೆ ಅದು ಕಂಡುಬಂದಿಲ್ಲ. ಈ ಬಗ್ಗೆ ದೇವಸ್ಥಾನದ ಆಡಳಿತ ಸಮಿತಿ ಶಂಕೆ ವ್ಯಕ್ತವಾಗಿ ವಿಚಾರಿಸಿದಾಗ ಅಸಲಿ ಚಿನ್ನಾಭರಣಗಳನ್ನು ತಾನು ತೆಗೆದಿರುವುದಾಗಿ ಒಪ್ಪಿಕೊಂಡಿದ್ದು, ಅವುಗಳನ್ನು ತಾನು ವೈಯುಕ್ತಿಕವಾಗಿ ಬಳಸಿಕೊಂಡಿರುವುದಾಗಿ ತಿಳಿಸಿದ್ದಾನೆ ಎಂದು ಹೇಳಲಾಗಿದೆ.
ಅಂದಾಜು 3.20 ಲಕ್ಷ ರೂ. ಮೌಲ್ಯದ 40 ಗ್ರಾಂ ತೂಕದ ಚಿನ್ನದ ಸರ, 5.84 ಲಕ್ಷ ರೂ. ಮೌಲ್ಯದ 73 ಗ್ರಾಂ ತೂಕದ ಹವಳ ಸೇರಿದ ಚಿನ್ನದ ಕಾಸಿ ತಾಳಿ ಸರ, 5.84 ಲಕ್ಷ ರೂ. ಮೌಲ್ಯದ 73 ಗ್ರಾಂ ತೂಕದ ಚಿನ್ನದ ಕರಿಮಣಿ ಸರ, 5.12 ಲಕ್ಷ ರೂ. ಮೌಲ್ಯದ 64 ಗ್ರಾಂ ತೂಕದ ಚಿನ್ನದ ನಕ್ಲೇಸ್, 48 ಸಾವಿರ ರೂ. ಮೌಲ್ಯದ 6 ಗ್ರಾಂ ತೂಕದ 3 ಚಿನ್ನದ ತಾಳಿ, 64 ಸಾವಿರ ರೂ. ಮೌಲ್ಯದ 8 ಗ್ರಾಂ ತೂಕದ ಚಿನ್ನದ ಚೈನ್ ಸರ ಸಹಿತ ಒಟ್ಟು 21.12 ಲಕ್ಷ ರೂ. ಮೌಲ್ಯದ 264 ಗ್ರಾಂ (33 ಪವನ್) ತೂಕದ ಚಿನ್ನಾಭರಣಗಳನ್ನು ಕಳವುಗೈದಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ನರಸಿಂಹ ಭಟ್ ನನ್ನು ಗಂಗೊಳ್ಳಿ ಖಾರ್ವಿಕೇರಿ ಶ್ರೀ ಮಹಾಂಕಾಳಿ ದೇವಸ್ಥಾನಕ್ಕೆ ಮೇ 16ರಿಂದ ಅರ್ಚಕನಾಗಿ ನೇಮಿಸಿಕೊಂಡು ಮಾಸಿಕ ಸಂಬಳ ಹಾಗೂ ವಾಸಕ್ಕೆ ಮನೆಯನ್ನು ನೀಡಿ ಬಾಡಿಗೆ ನೀಡಲಾಗುತ್ತಿತ್ತು. ಆರೋಪಿಯು ಮೇ 16ರಿಂದ ಸೆ.21 ರ ಮಧ್ಯಾವಧಿಯಲ್ಲಿ ದೇವಸ್ಥಾನದ ಅರ್ಚಕನಾಗಿದ್ದು ಕೊಂಡು ದೇವಸ್ಥಾನದಲ್ಲಿ ಈ ಕುಕೃತ್ಯವೆಸಗಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ಆರೋಪಿಸಲಾಗಿದೆ.
ಗಂಗೊಳ್ಳಿ ಪಿಎಸ್ಸೈ ಹರೀಶ್ ಆರ್. ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದು ಹೆಚ್ಚಿನ ತನಿಖೆ ಮುಂದುವರಿದಿದೆ.