ಉಡುಪಿ: ಆಟೋ ರಿಕ್ಷಾಗಳಿಗೆ ಕಲರ್ ಕೋಡ್ ಕಡ್ಡಾಯ ಆದೇಶ ಜಾರಿಗೆ ಆಗ್ರಹಿಸಿ ಮನವಿ

Oplus_131072

ಉಡುಪಿ, ಸೆ.22: ಆಟೋ ರಿಕ್ಷಾಗಳಿಗೆ ಕಲರ್ ಕೋಡ್ ಕಡ್ಡಾಯ ಎಂದು ಜಿಲ್ಲಾಧಿಕಾರಿ ಆದೇಶವನ್ನು ಕೂಡಲೇ ಜಾರಿಗೆ ತರುವಂತೆ ಆಗ್ರಹಿಸಿ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘಟನೆ ನಿಯೋಗ ಉಡುಪಿ ಜಿಲ್ಲಾಧಿಕಾರಿ ಹಾಗೂ ಆರ್‌ಟಿಓ ಅವರಿಗೆ ಇಂದು ಮನವಿ ಸಲ್ಲಿಸಲಾಯಿತು.

ಆರು ತಿಂಗಳ ಹಿಂದೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ರಿಕ್ಷಾ ಚಾಲಕ ಮಾಲಕರ ಸಭೆಯಲ್ಲಿ ಆಟೋ ರಿಕ್ಷಾಗಳಿಗೆ ಕಲರ್ ಕೋಡ್ ಕಡ್ಡಾಯ ಎಂಬುದಾಗಿ ಜಿಲ್ಲಾಧಿಕಾರಿ ಅದೇಶ ಮಾಡಿದ್ದರು. ಆದರೆ ಜಿಲ್ಲಾಧಿಕಾರಿ ಆದೇಶ ಈವರೆಗೆ ಜಾರಿಯಾಗಿಲ್ಲ. ಆಟೋ ರಿಕ್ಷಾಗಳಿಗೆ ಕಲರ್ ಕೋಡ್ ಇನ್ನೂ ಆಗಿಲ್ಲ.

ಈ ಹಿಂದೆ ಉಡುಪಿ ಜಿಲ್ಲೆಯಲ್ಲಿ ಉಡುಪಿ ತಾಲೂಕು ಒಂದೇ ಆಗಿತ್ತು. ಈಗ ಬ್ರಹ್ಮಾವರ ತಾಲೂಕು, ಕಾಪು ತಾಲೂಕು, ಉಡುಪಿ ತಾಲೂಕು ಆಗಿರುವುದರಿಂದ ಪ್ರತಿಯೊಂದು ತಾಲೂಕಿನ ವಲಯ 1 ಪರವಾನಿಗೆ ಹೊಂದಿರುವ ಅಟೋ ರಿಕ್ಷಾಕ್ಕೆ ಕಲರ್ ಕೋಡ್ ನೀಡಬೇಕು.

ಪ್ರಸ್ತುತ ಬ್ರಹ್ಮಾವರ ಹಾಗೂ ಕಾಪು ತಾಲೂಕಿಗೆ ಸಂಬಂಧಪಟ್ಟ ವಲಯ 1 ಪರವಾನಿಗೆ ಹೊಂದಿರುವ ಆಟೋ ರಿಕ್ಷಾಗಳು ಉಡುಪಿ ನಗರದಲ್ಲೇ ಇರುವುದರಿಂದ ಮತ್ತು 3 ತಾಲೂಕಿನ ರಿಕ್ಷಾಗಳು ಉಡುಪಿ ನಗರದಲ್ಲಿ ಸಂಚರಿಸಿರುವುದರಿಂದ ಪ್ರತಿನಿತ್ಯ ರಿಕ್ಷಾ ನಿಲುಗಡೆಗೆ ಸ್ಥಳಾವಕಾಶ ಕೊರತೆ ಎದುರಾಗುತ್ತದೆ. ಇದರಿಂದ ಚಾಲಕ-ಚಾಲಕರ ನಡುವೆ, ಘರ್ಷಣೆ, ಗಲಾಟೆ ನಡೆಯುತ್ತಲೇ ಇದೆ. ಈಗಾಗಲೇ ನಗರ ಠಾಣೆ, ಸಂಚಾರ ಠಾಣೆ ಮತ್ತು ನ್ಯಾಯಾಲಯದಲ್ಲಿಯೂ ಹಲವಾರು ಪ್ರಕರಣ ದಾಖಲಾಗಿವೆ.

ಆದುದರಿಂದ ಈ ಹಿಂದಿನ ರಿಕ್ಷಾ ಚಾಲಕ ಮಾಲಕರ ಸಭೆಯಲ್ಲಿ ನಿರ್ಣಯ ಮಾಡಿರುವ ವಲಯ, ಆಟೋ ರಿಕ್ಷಾಗಳಿಗೆ ’ಕಲರ್ ಕೋಡ್ ಕಡ್ಡಾಯ ಎಂದು ಆದೇಶ ಮಾಡಿರುವುದನ್ನು ಕೂಡಲೇ ಜಾರಿಗೆ ತಂದು ರಿಕ್ಷಾ ಚಾಲಕರಿಗೆ ದುಡಿಯಲು ಅವಕಾಶ ಮಾಡಿಕೊಡಬೇಕು ಎಂದು ನಿಯೋಗ ಮನವಿಯಲ್ಲಿ ಆಗ್ರಹಿಸಿದೆ.

ನಿಯೋಗದಲ್ಲಿ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘಟನೆಯ ಅಧ್ಯಕ್ಷ ಚೆನ್ನಕೇಶವ ಭಟ್ ಮತ್ತು ಆಶ್ರಯದಾತ ಆಟೋ ಯೂನಿಯನ್ ಪ್ರಧಾನ ಕಾರ್ಯದರ್ಶಿ ಶಿವಾನಂದ ಮೂಡಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!