ಫ್ರಿಡ್ಜ್‌ನಲ್ಲಿ ವಿವಾಹಿತ ಮಹಿಳೆಯ ಕೊಳೆತ ಶವ ಪತ್ತೆ- 30ಕ್ಕೂ ಹೆಚ್ಚು ತುಂಡುಗಳು!
ಬೆಂಗಳೂರು: ನಗರದ ವೈಯಾಲಿಕಾವಲ್ ನ ಮನೆಯೊಂದರಲ್ಲಿ ಮಹಿಳೆಯೊಬ್ಬಳ ಭೀಕರ ಹತ್ಯೆ ನಡೆದಿದ್ದು, ಫ್ರಿಡ್ಜ್ ನಲ್ಲಿ ಆಕೆಯ ಮೃತದೇಹದ 30 ಕ್ಕೂ ಹೆಚ್ಚು ತುಂಡುಗಳು ಇಂದು ಪತ್ತೆಯಾಗಿವೆ.
ಪ್ಲಾಟ್‌ನ ಮೊದಲ ಮಹಡಿಯಿಂದ ವಾಸನೆ ಬರುತ್ತಿದ್ದ ಕಾರಣ ಸ್ಥಳೀಯರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಅವರು ಭೇಟಿ ನೀಡಿದ್ದಾರೆ. ಪ್ರಾಥಮಿಕ ತನಿಖೆಯ ಬಳಿಕ ಮಾಧ್ಯಮಗಳಿಗೆ ಕೆಲ ಮಾಹಿತಿಗಳನ್ನು ನೀಡಿದ್ದು ”29 ವರ್ಷದ ಮಹಿಳೆಯ ಮೃತ್ತದೇಹ ಫ್ರಿಡ್ಜ್ ನಲ್ಲಿ ಪತ್ತೆಯಾಗಿದ್ದು, 30 ಕ್ಕೂ ಹೆಚ್ಚು ತುಂಡುಗಳನ್ನು ಮಾಡಲಾಗಿದೆ. ನಾಲ್ಕೈದು ದಿನದ ಹಿಂದೆ ಕೃತ್ಯ ನಡೆಸಲಾಗಿದೆ.ಸ್ಥಳಕ್ಕೆ SOCO(Scene of Crime Officer), ಶ್ವಾನದಳ, ಎಫ್ ಎಸ್ ಎಲ್ ಮತ್ತು ಉನ್ನತ ಮಟ್ಟದ ಅಧಿಕಾರಿಗಳು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.
ಹತ್ಯೆಗೀಡಾದ ಮಹಿಳೆ ಮಹಾಲಕ್ಷ್ಮೀ ಎಂದು ತಿಳಿದು ಬಂದಿದೆ. ವಿವಾಹಿತೆಯಾಗಿದ್ದು ಒಂದು ಮಗುವೂ ಇದ್ದು ಪತಿಯಿಂದ ದೂರವಾಗಿದ್ದರು ಎಂದು ಹೇಳಲಾಗುತ್ತಿದೆ. ನಗರದ ಮಾಲ್ ಒಂದರಲ್ಲಿ ಕೆಲಸ ಮಾಡಿಕೊಂಡು ಒಂಟಿಯಾಗಿ ವಾಸ ಮಾಡುತ್ತಿದ್ದರು ಎಂದು ಪ್ರಾಥಮಿಕ ಮಾಹಿತಿಗಳು ಲಭ್ಯವಾಗಿದೆ. ಘಟನೆ ಬೆಳಕಿಗೆ ಬಂದ ಬಳಿಕ ಪತಿಯೂ ಸ್ಥಳಕ್ಕೆ ಆಗಮಿಸಿರುವುದಾಗಿ ವರದಿಯಾಗಿದೆ.