ಕಾಂಗ್ರೆಸ್ ಸರ್ಕಾರದಲ್ಲಿ ಮತ್ತಷ್ಟು ಗಲಭೆಗಳು ಎದುರಾಗಲಿದ್ದು, ನಾಗಮಂಗಲ PFI ಸ್ಪಾಟ್ ಆಗುತ್ತಿದೆ: ಬಿಜೆಪಿ ಆರೋಪ
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿದ್ದು, ಮತ್ತಷ್ಟು ಗಲಭೆಗಳು ಎದುರಾಗಲಿದೆ ಎಂದು ಬಿಜೆಪಿ ಶುಕ್ರವಾರ ಹೇಳಿದೆ.
ನಾಗಮಂಗಲ ಹಿಂಸಾಚಾರದ ಘಟನೆ ಕುರಿತ ಬಿಜೆಪಿ ಸತ್ಯಶೋಧನಾ ಸಮಿತಿಯ ಮುಖ್ಯಸ್ಥರಾಗಿರುವ ಹಿರಿಯ ಬಿಜೆಪಿ ನಾಯಕ ಮತ್ತು ಮಾಜಿ ಡಿಸಿಎಂ ಡಾ ಸಿಎನ್ ಅಶ್ವತ್ಥ್ ನಾರಾಯಣ್ ಮತ್ತು ಇತರ ಸದಸ್ಯರು ತಮ್ಮ ವರದಿಯನ್ನು ಪಕ್ಷದ ರಾಜ್ಯಾಧ್ಯಕ್| ಬಿವೈ ವಿಜಯೇಂದ್ರ ಅವರಿಗೆ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಆಡಳಿತವಿದ್ದಾಗ ಗಣೇಶ ಹಬ್ಬದ ಸಂದರ್ಭದಲ್ಲಿ ಇಂತಹ ಯಾವುದೇ ಘರ್ಷಣೆಗಳನ್ನು ನಡೆದಿರಲಿಲ್ಲ. ಆದರೆ, ಈ ವರ್ಷದ ಗಣೇಶ ಮೆರವಣಿಗೆ ವೇಳೆ 8 ರಿಂದ 10 ಘರ್ಷಣೆಗಳು ನಡೆದಿವೆ ಎಂದು ಹೇಳಿದರು.
ಕಳೆದ ವರ್ಷ ನಾಗಮಂಗಲದಲ್ಲಿ ಇಂತಹುದೇ ಘಟನೆ ನಡೆದಿದ್ದು, ಅದನ್ನು ಮುಚ್ಚಿ ಹಾಕಲಾಗಿತ್ತು. ನಾಗಮಂಗಲದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಕ್ರಿಯವಾಗಿದ್ದು, ನಾಗಮಂಗಲ ಪಿಎಫ್ಐ ಸ್ಪಾಟ್ ಆಗುತ್ತಿದೆ ಎಂದು ತಿಳಿಸಿದರು.
ಒಂದು ಸಮುದಾಯದ ಓಲೈಕೆಯೇ ಇತ್ತೀಚಿನ ಘರ್ಷಣೆಗೆ ಕಾರಣವಾಗಿದೆ. ಜೊತೆಗೆ ಪೊಲೀಸರ ವೈಫಲ್ಯವೂ ಇದೆ ಎಂದು ಆರೋಪಿಸಿದರು.
ಪೊಲೀಸರನ್ನು ಸರ್ಕಾರ ಅಶಕ್ತರನ್ನಾಗಿ ಮಾಡಿದೆ. ಹೀಗಾಗಿಯೇ ಅವರು ಯಾವುದೇ ಕ್ರಮ ಕೈಕಗೊಂಡಿಲ್ಲ. ಕಳೆದ ಬಾರಿ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದ ಕಾರಣ ಕೋಮುವಾದಿ ಶಕ್ತಿಗಳಿಗೆ ಉತ್ತೇಜನ ನೀಡಿದಂತಾಗಿದೆ. ಇತ್ತೀಚೆಗೆ ನಡೆದ ನಾಗಮಂಗಲದ ದಂಗೆ ಪೂರ್ವ ಯೋಜಿತ ಕೃತ್ಯವಾಗಿದೆ. ಆರೋಪಿಗಳು ಮುಖವಾಡಗಳನ್ನು ಧರಿಸಿ, ಪೆಟ್ರೋಲ್ ಬಾಂಬ್ ಗಳನ್ನು ಸಿದ್ಧವಾಗಿ ಇಟ್ಟುಕೊಂಡಿದ್ದರು. ದಾಳಿ ವೇಳೆ ಕೆಲವು ಅಂಗಡಿಗಳನ್ನು ಗುರಿಯಾಗಿಸಿಕೊಂಡಿದ್ದಾರೆಂದು ಮಾಹಿತಿ ನೀಡಿದರು.