ಹೂಡೆ: ವಿದ್ಯಾರ್ಥಿಗಳು ಪ್ರಶ್ನಿಸುವ ಗುಣವನ್ನು ಬೆಳೆಸಿಕೊಳ್ಳಬೇಕು- ಶಿವಸುಂದರ್
ಹೂಡೆ: ಸಾಲಿಹಾತ್ ಮಹಿಳಾ ಪ್ರಥಮ ದರ್ಜೆ ಕಾಲೇಜು, ಹೂಡೆ ಮತ್ತು ಎಪಿಸಿಆರ್ ಉಡುಪಿ ಜಿಲ್ಲಾ ವತಿಯಿಂದ ವಿದ್ಯಾರ್ಥಿಗಳಿಗಾಗಿ ಕಾನೂನು ಕಾರ್ಯಗಾರವನ್ನು ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಅಂಕಣಗಾರ ಶಿವಸುಂದರ್ ಮಾತನಾಡಿ, “ವಿದ್ಯಾರ್ಥಿಗಳು ಪ್ರಶ್ನಿಸುವ ಗುಣವನ್ನು ಮೈಗೂಡಿಸಿಕೊಳ್ಳಬೇಕು. ಸಮಾಜದಲ್ಲಿ ಯಾರೇ ಏನು ಮಾತನಾಡಿದರೂ ಅದನ್ನು ಸುಮ್ಮನೇ ನಂಬದೆ ಅದರ ಕುರಿತು ಪ್ರಶ್ನಿಸಿ ವಿಚಾರಿಸಿ ಅರಿವು ಹೆಚ್ಚಿಸಿಕೊಳ್ಳಬೇಕು” ಎಂದರು.
ಇವತ್ತು ಸಮಾಜದಲ್ಲಿ ಬಡವರ ಮತ್ತು ಶ್ರೀಮಂತರ ನಡುವಿನ ಅಂತರ ಹೆಚ್ಚಾಗುತ್ತಿದೆ. ದೇಶದ ದೊಡ್ಡ ಮಟ್ಟದ ಸಂಪನ್ಮೂಲ ಕೆಲವೇ ಕೆಲವು ಉದ್ಯಮಿಗಳ ಮುಷ್ಠಿಯಲ್ಲಿದೆ. ಇದು ಸಮ ಸಮಾಜದ ನಿರ್ಮಾಣಕ್ಕೆ ತೊಡಕಾಗಿದೆ ಎಂದು ಹೇಳಿದರು.
ಪ್ರತಿಭೆಯಿದ್ದರೂ ಸೂಕ್ತ ಶ್ರೈಕ್ಷಣಿಕ ಅವಕಾಶ ಇಲ್ಲದೇ ಇರುವುದರಿಂದ ಹಲವು ವಿದ್ಯಾರ್ಥಿಗಳು ಅವಕಾಶ ವಂಚಿತರಾಗುತ್ತಿದ್ದಾರೆ. ಸಂವಿಧಾನ ಅವಕಾಶ ಕೊಟ್ಟಿದ್ದರೂ ವ್ಯವಸ್ಥೆಯ ಹುಳುಕಿನ ಕಾರಣ ಈ ಸ್ಥಿತಿ ನಿರ್ಮಾಣವಾಗಿದೆ. ಪ್ರಶ್ನಿಸುವ ಮನೋಭಾವನೆ ಬೆಳೆಸಿಕೊಂಡಾಗ ಈ ಹುಳುಕುಗಳನ್ನು ಸರಿಪಡಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ನಂತರ ಮಾತನಾಡಿದ ಉಚ್ಚ ನ್ಯಾಯಾಲಯದ ವಕೀಲರಾದ ವಿನಯ ಶ್ರೀವಾಸ್ತವ್ ಸಂವಿಧಾನ ಪೀಠಿಕೆಯ ಕುರಿತು ಅರಿವು ಮೂಡಿಸಿದರು.
ಯಾಸೀನ್ ಕೋಡಿಬೆಂಗ್ರೆ ಪ್ರಸ್ತಾವಿಕ ಭಾಷಣ ಮಾಡಿದರು. ಝೀಫಾ ನಾಝ್ ಸ್ವಾಗತಿಸಿದರು. ಆಯಿಶಾ ಫಾಝಿಯಾ ಕಿರಾತ್ ಪಠಿಸಿದರು. ಆಯಿಶಾ ಸೀಮಾಝ್ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಆಯಿಶಾ ಫಾಝಿಯಾ ಧನ್ಯವಾದವಿತ್ತರು.
ಈ ಸಂದರ್ಭದಲ್ಲಿ ಸಾಲಿಹಾತ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಶಬೀನಾ, ಎ.ಪಿ.ಸಿ.ಆರ್ ಜಿಲ್ಲಾ ಕಾರ್ಯದರ್ಶಿ ಪ್ರಶಾಂತ್ ಮೋಗವೀರ, ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಇದ್ರಿಸ್ ಹೂಡೆ, ಆಡಳಿತಾಧಿಕಾರಿ ಅಸ್ಲಮ್ ಹೈಕಾಡಿ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.