ಮೈಸೂರು: ಪ್ರಿ ವೆಡ್ಡಿಂಗ್ ಫೋಟೋಶೂಟ್ – ತೆಪ್ಪ ಮುಳುಗಿ ನವಜೋಡಿ ಸಾವು
ಮೈಸೂರು: ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಲು ಹೋದ ನವಜೋಡಿ ತೆಪ್ಪ ಮುಳಗಿ ಸಾವನ್ನಪ್ಪಿರುವ ಘಟನೆ ಮೈಸೂರಿನ ತಲಕಾಡಿನಲ್ಲಿ ನಡೆದಿದೆ.
ಇತ್ತೀಚೆಗೆ ಮದುವೆಗೂ ಮುಂಚೆ ವಧು ಮತ್ತು ವರ ಸ್ಟೈಲಿಶ್ ಆಗಿ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸುವ ಹೊಸ ಟ್ರೆಂಡ್ ಹುಟ್ಟಿಕೊಂಡಿದೆ. ಫೋಟೋ ವಿಭಿನ್ನವಾಗಿ ಮತ್ತು ಚೆನ್ನಾಗಿ ಬರಬೇಕು ಎಂದು ಹುಚ್ಚು ಸಾಹಸಕ್ಕೆ ಕೈಹಾಕಿ ಜೋಡಿಗಳು ಫೋಟೋ ಶೂಟ್ ಮಾಡಿಸುತ್ತಾರೆ. ಹೀಗೆ ಫೋಟೋ ಶೂಟ್ ಮಾಡಿಸಲು ಹೋಗಿ ನವಜೋಡಿಗಳು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿಗಳಾಗಿದ್ದ ಚಂದ್ರು ಮತ್ತು ಶಶಿಕಲಾ ಮದುವೆ ನಿಶ್ಚಯವಾಗಿತ್ತು. ಅಂತೆಯೇ ನವೆಂಬರ್ 22ರಂದು ಮದುವೆ ಮಾಡಲು ಕುಟುಂಬಸ್ಥರು ತಯಾರಿ ಕೂಡ ನಡೆಸಿದ್ದರು. ಆದರೆ ಚಂದ್ರು ಮತ್ತು ಶಶಿಕಲಾ ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಲು ಮನೆಯವರಿಗೆ ಹೇಳದೇ ಮೈಸೂರಿನ ತಲಕಾಡಿನ ಮುಡುಕುತೊರೆ ಗ್ರಾಮದಲ್ಲಿ ಹರಿಯುವ ಕಾವೇರಿ ನದಿಗೆ ಹೋಗಿದ್ದಾರೆ.
ಮುಡುಕುತೊರೆಯ ಕಾವೇರಿ ನದಿಯಲ್ಲಿ ತೆಪ್ಪವನ್ನು ತೆಗೆದುಕೊಂಡು ಮಧ್ಯಭಾಗದಲ್ಲಿ ಫೋಟೋಶೂಟ್ ಮಾಡಿಸಲು ತೆರೆಳಿದ್ದಾರೆ. ಈ ವೇಳೆ ತೆಪ್ಪ ಮುಳುಗಿ ನವಜೋಡಿಗಳಿಬ್ಬರು ನೀರುಪಾಲಾಗಿದ್ದಾರೆ. ನಂತರ ಸ್ಥಳಕ್ಕೆ ಬಂದ ಪೊಲೀಸರು ಕಾರ್ಯಾಚರಣೆ ಮಾಡಿ ಇಬ್ಬರ ಶವಗಳನ್ನು ಹೊರಕ್ಕೆ ತೆಗೆದಿದ್ದಾರೆ. ಈ ಸಂಬಂಧ ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.