ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರ ‘ಪಾಕಿಸ್ತಾನ’ ಹೇಳಿಕೆ: ಸ್ವಯಂಪ್ರೇರಿತವಾಗಿ ವಿಚಾರಣೆಗೆ ಕೈಗೊತ್ತಿಕೊಂಡ ಸುಪ್ರೀಂಕೋರ್ಟ್
ಹೊಸದಿಲ್ಲಿ: ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶರು ಪ್ರಕರಣವೊಂದರ ವಿಚಾರಣೆ ವೇಳೆ ಹೇಳಿದ ವಿವಾದಾತ್ಮಕ ಹೇಳಿಕೆಗಳನ್ನು ಒಳಗೊಂಡ ವೀಡಿಯೊ ಕ್ಲಿಪ್‌ಗಳನ್ನು ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡಿದ್ದು, ಈ ಕುರಿತು ವರದಿಯನ್ನು ನೀಡುವಂತೆ ಕರ್ನಾಟಕ ಹೈಕೋರ್ಟ್ ಗೆ ಆದೇಶ ನೀಡಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಸಂಜೀವ್ ಖನ್ನಾ, ಬಿಆರ್ ಗವಾಯಿ, ಸೂರ್ಯಕಾಂತ್ ಮತ್ತು ಹೃಷಿಕೇಶ್ ರಾಯ್ ಅವರನ್ನೊಳಗೊಂಡ ಐವರು ನ್ಯಾಯಾಧೀಶರ ಪೀಠವು ಇಂದು ಈ ಕುರಿತು ವರದಿ ನೀಡುವಂತೆ ಕರ್ನಾಟಕ ಹೈಕೋರ್ಟ್ ಗೆ ಸೂಚಿಸಿದೆ.
ವಿಚಾರಣೆಯೊಂದರ ಸಂದರ್ಭದಲ್ಲಿ, “ಮೈಸೂರು ರಸ್ತೆ ಮೇಲುಸೇತುವೆಗೆ ಹೋಗಿ ನೋಡಿ, ಪ್ರತಿ ಆಟೋ ರಿಕ್ಷಾದಲ್ಲೂ 10 ಮಂದಿಯಿರುತ್ತಾರೆ. ಇಲ್ಲಿ ಕಾನೂನು ಅನ್ವಯಿಸುವುದಿಲ್ಲ. ಯಾಕೆಂದರೆ, ಮೈಸೂರು ಮೇಲ್ಸೇತುವೆಯು ಗೋರಿಪಾಳ್ಯದಿಂದ ಎಡಕ್ಕೆ ಮಾರುಕಟ್ಟೆಗೆ ತೆರಳುತ್ತದೆ. ಇದು ಪಾಕಿಸ್ತಾನದಲ್ಲಿದೆ, ಭಾರತದಲ್ಲಲ್ಲ. ಇದು ವಾಸ್ತವ. ಅಲ್ಲಿಗೆ ಎಷ್ಟೇ ಕಟ್ಟುನಿಟ್ಟಿನ ಪೊಲೀಸ್ ಅಧಿಕಾರಿಯನ್ನು ನೇಮಕ ಮಾಡಿದರೂ, ಅವರನ್ನು ಥಳಿಸಲಾಗುತ್ತೆ” ಎಂದು ವೇದವ್ಯಾಸಾಚಾರ್ ಶ್ರೀಷಾನಂದ ಸಾಯಿ ಹೇಳಿದ್ದರು. ನ್ಯಾಯಮೂರ್ತಿಗಳ ಹೇಳಿಕೆ ವ್ಯಾಪಕ ಟೀಕೆಗೆ ಕಾರಣವಾಗಿತ್ತು.
ಈ ಕುರಿತು ಸುಪ್ರೀಂ ಕೋರ್ಟ್‌ಗೆ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯವು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ಸೂಚಿಸಿದೆ. ಬಗ್ಗೆ ಮುಂದಿನ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ.