ವಿಶ್ವ ಕೌಶಲ್ಯ ಸ್ಪರ್ಧೆ: ಅಡುಗೆ ವಿಭಾಗದಲ್ಲಿ ಹರ್ಷವರ್ಧನ್ ಐತಿಹಾಸಿಕ ಸಾಧನೆ
ಮಣಿಪಾಲ, ಸೆ.19: ಫ್ರಾನ್ಸ್‌ನ ಯುರೆಕ್ಸ್ ಪೋ ಲಿಯಾನ್‌ನಲ್ಲಿ ಸೆ.10ರಿಂದ 15ರವರೆಗೆ ನಡೆದ 47ನೇ ವಿಶ್ವ ಕೌಶಲ್ಯ ಸ್ಪರ್ಧೆಯ ಅಡುಗೆ ವಿಭಾಗದಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿದ ಮಣಿಪಾಲ ವ್ಯಾಗ್ಶದ ಬಿಎ ಪಾಕಶಾಲೆಯ ವಿದ್ಯಾರ್ಥಿ ಹರ್ಷವರ್ಧನ್ ಮೆಡಾಲಿಯನ್ ಆಫ್ ಎಕ್ಸ್‌ಲೆನ್ಸ್ ಪಡೆಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ ಎಂದು ವ್ಯಾಗ್ಶದ ಪ್ರಾಂಶುಪಾಲ ಡಾ.ಕೆ.ತಿರು ಜ್ಞಾನ ಸಂಬಂಧಮ್ ತಿಳಿಸಿದ್ದಾರೆ.
ಮಣಿಪಾಲದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸ್ಪರ್ಧೆಯಲ್ಲಿ 70ಕ್ಕೂ ಹೆಚ್ಚು ದೇಶಗಳಿಂದ 1400 ಸ್ಪರ್ಧಿಗಳು ಭಾಗವಹಿಸಿದ್ದು, ಭಾರತವು 60 ಸ್ಪರ್ಧಿಗಳೊಂದಿಗೆ 52 ಕೌಶಲ್ಯಗಳಲ್ಲಿ ಸ್ಪರ್ಧಿಸಿತ್ತು. ಭಾರತ ತಂಡವು 3 ಕಂಚಿನ ಪದಕಗಳು ಮತ್ತು 12 ಮೆಡಾಲಿಯನ್‌ಗಳ ಪಡೆಯುವ ಮೂಲಕ ಸಾಧನೆ ಮಾಡಿತು ಎಂದರು.
ಅಡುಗೆ ವಿಭಾಗದಲ್ಲಿ ಮಂಗಳೂರು ಮೂಲದ ಹರ್ಷವರ್ಧನ್ ಭಾರತ ವನ್ನು ಪ್ರತಿನಿಧಿಸಿದ್ದು, ಈ ವಿಭಾಗದಲ್ಲಿ 43 ದೇಶಗಳ ತಲಾ ಒಬ್ಬರಂತೆ 43 ಸ್ಪರ್ಧಿಗಳು ಭಾಗವಹಿಸಿದ್ದರು. ಹರ್ಷವರ್ಧನ್ ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಈ ಮೂಲಕ ಭಾರತವು ಮೊದಲ ಬಾರಿಗೆ ಅಡುಗೆ ಕೌಶಲ್ಯದಲ್ಲಿ ಈ ಗೌರವವನ್ನು ಪಡೆದಿದೆ ಎಂದು ಅವರು ತಿಳಿಸಿದರು.
ಇದರಲ್ಲಿ ಹಾಟ್ ಕಿಚನ್, ಕೋಲ್ಡ್ ಕಿಚನ್, ಬಫೆ ಪ್ರೆಸೆಂಟೇಶನ್‌ಗಳು ಮತ್ತು ಬೇಕರಿ ಮಾಡ್ಯೂಲ್ ಅನ್ನು ವಿಶ್ವ ಕೌಶಲ್ಯದ ಮಾನದಂಡಗಳಿಗೆ ಅನುಗುಣವಾಗಿ ಮಾಸ್ಟರಿಂಗ್ ಮಾಡಲಾಗಿದೆ. ವಲಯ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಮೂಲಕ ಅಂತಾರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾದ ಹರ್ಷವರ್ಧನ್ ಮೂರು ತಿಂಗಳ ಕಠಿಣ ತರಬೇತಿಯನ್ನು ಪಡೆದು ಕೊಂಡಿದ್ದರು ಎಂದು ಅವರು ಹೇಳಿದರು.
ವಿದ್ಯಾರ್ಥಿ ಹರ್ಷವರ್ಧನ್ ಮಾತನಾಡಿ, ಈ ಸ್ಪರ್ಧೆಯಲ್ಲಿ ಭಾಗವಹಿಸಿ ಸಾಧನೆ ಮಾಡುವುದು ಬಹಳ ದೊಡ್ಡ ಸವಾಲಿನ ಕೆಲಸ ಆಗಿತ್ತು. ಅದಕ್ಕಾಗಿ ನನ್ನ ತರಬೇತುದಾರರಾದ ಕೆ.ತಿರು ಅವರು ಸಾಕಷ್ಟು ಮಾರ್ಗದರ್ಶನ ಮಾಡಿ ದ್ದರು. ಅದೇ ರೀತಿ ಕಾಲೇಜಿನ ಇತರ ಬಾಣಸಿಗರು ಕೂಡ ನನಗೆ ತುಂಬಾ ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.