ಕುಂದ ಕನ್ನಡದ ಸ್ಟ್ಯಾಂಡ್ ಅಪ್ ಕಾಮಿಡಿ ರಿಯಾಲಿಟಿ ಶೋ “ಕಾಮಿಡಿ ಚಾವಡಿ” ಯ ಪೋಸ್ಟರ್ ಬಿಡುಗಡೆ
ಬ್ರಹ್ಮಾವರ(ಉಡುಪಿ ಟೈಮ್ಸ್ ವರದಿ): ಉಡುಪಿ ಟೈಮ್ಸ್ ನ ಅಂಗ ಸಂಸ್ಥೆ ‘ಪಬ್ಲಿಕ್ ಲೈನ್‘ ವಾಹಿನಿಯ ಕುಂದ ಕನ್ನಡದ ಸ್ಟ್ಯಾಂಡ್ ಅಪ್ ಕಾಮಿಡಿ ರಿಯಾಲಿಟಿ ಶೋ ಮುನಿಯಾಲ್ ಗೋಧಾಮ ಪ್ರಸ್ತುತಿ “ಕಾಮಿಡಿ ಚಾವಡಿ” ಯ ಪೋಸ್ಟರ್ ಬಿಡುಗಡೆ ಸೆ.16ರಂದು ಬ್ರಹ್ಮಾವರದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕುಂದ ಕನ್ನಡದ ರಾಯಭಾರಿ ಎಂದೇ ಪ್ರಸಿದ್ಧರಾದ ಮನು ಹಂದಾಡಿ ಹಾಗೂ ಕಲಾವಿದ ಹಾಗೂ ನಾಟಕ ನಿರ್ಮಾಪಕರಾದ ಆಲ್ವಿನ್ ಅಂದ್ರಾದೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಭಾಷೆಯನ್ನು ಬದುಕು ಎಂದವರು ಕುಂದಾಪುರದವರು. ಕುಂದಾಪುರ ಕನ್ನಡಕ್ಕೆ ಪ್ರಾಚೀನತೆ ಸಂಸ್ಕೃತಿಯ ಹಾಗೂ ಗ್ರಾಮೀಣ ಸೊಗಡಿನ ಸಿಂಚನವಿದೆ. ಜ್ಞಾನಪೀಠ ಪ್ರಶಸ್ತಿ ವಿಜೇತ ಶಿವರಾಮ ಕಾರಂತರ ಪಾದಸ್ಪರ್ಶವಾದ ಪವಿತ್ರ ಭೂಮಿ ಕುಂದನಾಡು.
ಪಂಚ ಗಂಗಾವಳಿ ಇಂದ ಆವೃತಗೊಂಡ ಈ ಊರು ಭೂಪಟದಲ್ಲಿ ಪುಟ್ಟದಾದರೂ ಸಂಸ್ಕೃತಿಯಲ್ಲಿ ಹಿರಿದಾದ್ದು, ಇಂತಹ ಕುಂದಗನ್ನಡದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ “ಸ್ಟ್ಯಾಂಡ್ ಅಪ್ ” ಕಾಮಿಡಿ ಸ್ಪರ್ಧೆ ಪಬ್ಲಿಕ್ ಲೈನ್ ಯೂಟ್ಯೂಬ್ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಕುಂದಗನ್ನಡ ಭಾಷೆ ಸೊಗಡಿನಲ್ಲಿ ನಗೆ ಚಟಾಕಿಗಳ ಕಚಗುಳಿಯನ್ನ ಇಡುವ ಸ್ಪರ್ಧೆಯಲ್ಲಿ ವಿಜೇತರಿಗೆ ನಗದು ಹಾಗೂ ಶಾಶ್ವತ ಫಲಕದ ಬಹುಮಾನವನ್ನು ನೀಡಲಾಗುತ್ತದೆ, ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲಿ ನೀಡಲಾಗುವುದು.
ಈ ಕಾರ್ಯಕ್ರಮದ ಶೀರ್ಷಿಕೆ ಪ್ರಾಯೋಜಕರಾಗಿ ಮುನಿಯಾಲಿನ ಹೆಸರಾಂತ ಉದ್ಯಮಿ ಹಾಗೂ ಪರಿಸರ ಪ್ರೇಮಿ ಡಾ. ರಾಮಕೃಷ್ಣ ಆಚಾರ್ಯರ ಮಾಲಕತ್ವದ ಗೋಧಾಮ ವಹಿಸಿದೆ. ಪ್ರಧಾನ ಪ್ರಾಯೋಜಕರಾಗಿ ಅನಿವಾಸಿ ಉದ್ಯಮಿ ಹಾಗೂ ಸಮಾಜ ಸೇವಕರು ಡಾ.ಶೇಖ್ ವಾಹಿದ್ ಉಡುಪಿ ಇವರ ಸ್ಟಾರ್ ಪಿ.ವಿ.ಎಸ್ ಕನ್ಸ್ಟ್ರಕ್ಷನ್ ಆಂಡ್ ಡೆವಲಪರ್ ನೇತೃತ್ವ ವಹಿಸಿದೆ.
ಸಹ ಪ್ರಾಯೋಜಕರಾಗಿ ಕುಂದಾಪುರದ ಮನೆ ಮಾತಾದ ಆಭರಣ ಮಳಿಗೆ ಉದಯ ಜ್ಯುವೆಲ್ಲರ್, ಮಣಿಪಾಲದ ಎಚ್.ಪಿ.ಆರ್ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸ್, ಕುಂದಾಪುರದ ಪ್ರತಿಷ್ಠಿತ ಆಸ್ಪತ್ರೆ ಚಿನ್ಮಯ ಆಸ್ಪತ್ರೆ, ಮಣಿಪಾಲದ ಹೆಸರಾಂತ ಏಕೈಕ ಸ್ವಾಸ್ಥ್ಯ ಕೇಂದ್ರ ತಪೋವನ ಮತ್ತು ಉಡುಪಿಯ ಪ್ರಸಿದ್ಧ ಹೋಟೆಲ್ ಮಥುರಾ ಕಂಫರ್ಟ್ಸ್ ಸಹಕಾರ ನೀಡಲಿದೆ.
ಸಮಾರಂಭದಲ್ಲಿ ಕಾರ್ಯಕ್ರಮದಲ್ಲಿ ಉಡುಪಿ ಟೈಮ್ಸ್ ಪ್ರವರ್ತಕರಾದ ಉಮೇಶ್ ಮಾರ್ಪಳ್ಳಿ, ಅಕ್ಷತಾ ಗಿರೀಶ್, ಸಂಸ್ಥೆಯ ಸಿಬ್ಬಂದಿ ಕೃತಿ ಮೂಡುಬೆಟ್ಟು ಉಪಸ್ಥಿತರಿದ್ದರು.