ಇಡೀ ವಿಶ್ವವೇ ವಿಶ್ವಕರ್ಮನಿಗೆ ಋಣಿ: ಬೈಂದೂರು ತಹಶೀಲ್ದಾರ್ ಪ್ರದೀಪ್

ಬೈಂದೂರು ಸೆ.17 : ತಾಲೂಕು ಆಡಳಿತ ಸೌಧ ಬೈಂದೂರು, ತಾಲೂಕು ಪಂಚಾಯತ್ ಬೈಂದೂರು ವತಿಯಿಂದ ವಿಶ್ವಕರ್ಮ ಜಯಂತಿ‌ ಮಂಗಳವಾರ ಬೈಂದೂರು ತಾಲೂಕು ಆಡಳಿತ ಸೌಧ ಸಭಾಂಗಣದಲ್ಲಿ ನಡೆಯಿತು.

ಬೈಂದೂರು ತಹಶೀಲ್ದಾರ್ ಪ್ರದೀಪ್ ಆರ್ ವಿಶ್ವಕರ್ಮ ಜಯಂತಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ವಿಶ್ವಕರ್ಮ ದಿನ, ವಿಶ್ವಕರ್ಮನು ಪಂಚಬ್ರಹ್ಮರ ಮೂಲಕ, ಲೋಕಕ್ಕೆ ಪಂಚಶಿಲ್ಪ ಕಾರ್ಯಗಳ ಮೂಲಕ ಸೃಷ್ಟಿಯಲ್ಲಿ ಸೃಜನಶೀಲತೆ ನಿರಂತರವಾಗಿ ನಡೆಯುತ್ತಿರುವಂತೆ ನೋಡಿಕೊಂಡವನು. ಹೀಗಾಗಿ ಇಡೀ ವಿಶ್ವವೇ ವಿಶ್ವಕರ್ಮನಿಗೆ ಋಣಿಯಾಗಿದೆ. ವಿಶ್ವಕರ್ಮ ಸಮುದಾಯದವನ್ನು ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ. ಅದೇ ರೀತಿ ಸಮುದಾಯದ ಮೂಲಕ ಪಂಚ ಕಸಬನ್ನು ಇನ್ನೂ ಅತ್ಯಂತ ಜನಪ್ರಿಯಗೊಳಿಸಲು ಮತ್ತು ಕಲಾ ಕೌಶ್ಯಲಗಳನ್ನು ಮುಂದಿನ ಪೀಳಿಗೆಗೆ ನೀಡುವಂತಾಗಬೇಕು ಹಾಗೂ ಈ ಸಮಾಜವರು ಶಿಸ್ತು ಸಂಯಮ ತಾಳ್ಮೆ ಜಾಣತನ, ಸಾಮಾಜಿಕ ಬದ್ಧತೆಯನ್ನು ರೂಢಿಸಿಕೊಂಡು ಬಂದಿದ್ದಾರೆ ಎಂದರು.

ಕುಲುಮೆ ಕೆಲಸ ಹಿರಿಯರಾದ ಕೃಷ್ಣಯ್ಯ ಆಚಾರ್ಯ ನೀರ್ಕೇರೆ ಉಳ್ಳೂರು ಇವರು ಬೈಂದೂರು ತಹಶೀಲ್ದಾರ್ ಕಚೇರಿ ಹಾಗೂ ಬೈಂದೂರು ತಾಲೂಕು ಪಂಚಾಯತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಬೈಂದೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಭಾರತಿ ಮಾತನಾಡಿ, ಭಗವಾನ್ ವಿಶ್ವಕರ್ಮನನ್ನು ಬ್ರಹ್ಮಾಂಡದ ಮೊದಲ ವಾಸ್ತುಶಿಲ್ಪಿ, ಕುಶಲಕರ್ಮಿ ಮತ್ತು ಇಂಜಿನಿಯರ್ ಎಂದು ಪರಿಗಣಿಸಲಾಗಿದೆ. ಈ ದಿನದಂದು ವಿಶ್ವಕರ್ಮ ದೇವರನ್ನು ಪೂಜಿಸುವುದರಿಂದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಜೊತೆಗೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯ ಸಾಧ್ಯತೆಗಳಿವೆ. ಶ್ರಮ ಸಂಸ್ಕೃತಿಯ ಬದುಕಿಗೆ ವಿಶ್ವಕರ್ಮರ ತತ್ವ ಸದಾ ಅನುಕರಣೆಯ ಮತ್ತು ಅಭಿನಂದನೆಯ ಎಂದರು.

ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್, ಉಪ್ರಳ್ಳಿ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಕಳಿ ಚಂದ್ರಯ್ಯ ಆಚಾರ್ಯ, ದೇವಸ್ಥಾನದ ಎರಡನೇ ಮೊಕ್ತೇಸರ ಚಿತ್ತೂರು ಪ್ರಭಾಕರ ಆಚಾರ್ಯ, ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಶೋಕ್ ಆಚಾರ್ಯ ನಾವುಂದ, ಬೈಂದೂರು ವಿಶ್ವಕರ್ಮ ಯುವಕ ಸಂಘದ ಅಧ್ಯಕ್ಷ ನಾಗರಾಜ ವೆಂಕರಮಣ ಆಚಾರ್ಯ ಬಂಕೇಶ್ವರ, ಮರವಂತೆ ವಿಶ್ವಕರ್ಮ ಸಂಘದ ಉಪಾಧ್ಯಕ್ಷ ಶ್ರೀಧರ್ ಆಚಾರ್ಯ ಮರವಂತೆ, ಕುಂದಾಪುರ ಬೈಂದೂರು ತಾಲೂಕು ಕಾರ್ಪೊರೇಟರ್ ಯೂನಿಯನ್ ಅಧ್ಯಕ್ಷ ಮಹೇಶ್ ಆಚಾರ್ಯ ಉಪ್ಪುಂದ, ವಿಶ್ವಕರ್ಮ ಸಮಾಜ ಸೇವಾ ಸಂಘದ ಬೈಂದೂರು ಅಧ್ಯಕ್ಷ ನಾರಾಯಣ ಆಚಾರ್ಯ ನಾವುಡ ಉಪಸ್ಥಿತರಿದ್ದರು.

ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಬಿ.ಆರ್.ಪಿ‌ ರಾಮಕೃಷ್ಣ ದೇವಾಡಿಗ ಕಾರ್ಯಕ್ರಮ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ನಿರ್ವಹಿಸಿದರು. ಪತ್ರಕರ್ತ ವಿಶ್ವನಾಥ ಆಚಾರ್ ಸನ್ಮಾನ ಪತ್ರ ವಾಚಿಸಿದರು.

Leave a Reply

Your email address will not be published. Required fields are marked *

error: Content is protected !!